ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮುಂದುವರೆದ ಪ್ರತಿಭಟನೆ

kr--pete

ಕೆ.ಆರ್.ಪೇಟೆ, ಸೆ.8-ರಾಜ್ಯದ ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ವಿವಿಧ ರೈತಪರ ಹಾಗೂ ಕನ್ನಡ ಪರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆಯನ್ನು ಮುಂದುವರೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಕಾರ್ಯಾಧ್ಯಕ್ಷ ಟಿ.ವೈ.ಆನಂದ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್, ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಅಧ್ಯಕ್ಷ ಎಸ್.ವಿ.ವಿನಯ್, ಕಾರು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪಿಡಿಜಿ ಕೊಪ್ಪಲು ಮಹೇಶ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ರಾಜ್ಯ ಸರ್ಕಾರವು ಕಾವೇರಿ ಕೊಳ್ಳದಲ್ಲಿ ಭೀಕರ ಬರಗಾಲವಿದ್ದರೂ ನೀರು ಬಿಡುವ ತೀರ್ಮಾನ ಕೈಗೊಂಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ರಾಜ್ಯದ ರೈತರು ಕೆರೆ-ಕಟ್ಟೆಗಳಿಗೆ ನೀರು ಬಿಡಿ ಎಂದರೂ ಕಿವಿ ಕೇಳಿಸದಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರವು ಅವೈಜ್ಞಾನಿಕ ತೀರ್ಪು ನೀಡಿರುವ ಸುಪ್ರೀಂ ಆದೇಶವನ್ನು ಪಾಲಿಸುವ ಏಕೈಕ ಉದ್ದೇಶದಿಂದ ನೀರು ಬಿಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಬೈಕ್ ರ್ಯಾಲಿ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು. ರಾಜ್ಯ ಸರ್ಕಾರದ ಕಾನೂನು ವೈಫಲ್ಯವೇ ಕಾವೇರಿ ಜಲ ವಿವಾದದಲ್ಲಿ ರಾಜ್ಯ ಹಿನ್ನಡೆಗೆ ಪ್ರಮುಖ ಕಾರಣ ಎಂದು ಹೇಳಿದ ಕಸಾಪ ಅಧ್ಯಕ್ಷ ತೇಜಸ್ವಿ ರಾಜ್ಯ ಸರ್ಕಾರ ಸುಪ್ರಿಂ ಕೋರ್ಟಿನ ಆದೇಶ ಅಥವಾ ಕಾವೇರಿ ನ್ಯಾಯಾಧೀಕರಣದ ಆದೇಶಕ್ಕೆ ತಲೆಬಾಗಿ ಅವರು ಹೇಳಿದಾಗಲೆಲ್ಲಾ ತಮಿಳು ನಾಡಿಗೆ ನೀರು ಬಿಡುವ ನೀರುಗಂಟಿಯಾಗದೆ ನಮ್ಮ ಹಕ್ಕಿನ ನೀರು ಬಳಕೆಗೆ ಅವಕಾಶ ಕೋರಿ ನ್ಯಾಯಾಲಯದ ಮುಂದೆ ನಿಲ್ಲಬೇಕು ಎಂದು ಪ್ರತಿಪಾದಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಮತ್ತು ರೈತಸಂಘದ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನಾ ಪ್ರದರ್ಶನ ನಡೆಸಿದರೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದ ಹೊರವಲಯದ ಮೈಸೂರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಹೇಮಗಿರಿಯಲ್ಲಿ ಪ್ರತಿಭಟನೆ: ತಮಿಳು ನಾಡಿಗೆ 10 ದಿನಗಳ ಕಾಲ ನಿತ್ಯ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ತಾಲೂಕಿನ ಹೇಮಗಿರಿ ಅಣೆಕಟ್ಟೆಯ ಬಳಿ ತಾಲೂಕು ರೈತಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಜತ್ಯಾತೀತ ಜನತಾದಳ, ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ತಾಲೂಕು ಘಟಕಗಳು ಸೇರಿದಂತೆ ಎಲ್ಲಾ ಹೋರಾಟಗಾರರು ಇಂದು ಪ್ರತಿಭಟನೆ ನಡೆಸಿದರು. ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಕಾಂಗ್ರೆಸ್ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಎಸ್.ವೇಣು, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಎಸ್.ವಿ.ವಿನಯ್ ಮತ್ತಿತರರಿದ್ದರು.

 

► Follow us on –  Facebook / Twitter  / Google+

Sri Raghav

Admin