ಕಾವೇರಿ ವಿವಾದ ಕಾನೂನು ಚೌಕಟ್ಟಿನಲ್ಲೇ ಬಗೆಹರಿಯಬೇಕು : ದೇವೇಗೌಡರ
ಹಾಸನ, ಸೆ.15- ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಆದರೂ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಿರುವುದರಿಂದ ಜನತೆ ಶಾಂತಿ ಕಾಪಾಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶ ಪಾಲಿಸದೆ ಬೇರೆ ವಿಧಿಯಿಲ್ಲ. ಆದೇಶ ಪಾಲಿಸದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ, ಬಂಗಾರಪ್ಪ ಅವರೆಲ್ಲ ಯಾವ ರೀತಿ ತೊಂದರೆಗೆ ಸಿಲುಕಿದರೆಂಬುದು ನನಗೆ ತಿಳಿದಿದೆ. ಈ ಸಮಸ್ಯೆ ಕಾನೂನಿನ ಚೌಕಟ್ಟಿನಲ್ಲೇ ಬಗೆಹರಿಯಬೇಕಿರುವುದರಿಂದ ಆದೇಶ ಪಾಲಿಸಲೇಬೇಕಿದೆ ಎಂದು ವಿವರಿಸಿದರು.
ಎಚ್.ಡಿ.ಕುಮಾರಸ್ವಾಮಿ 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕಾದ ಅನ್ಯಾಯಗಳ ವಿರುದ್ಧ ವಿಸ್ತೃತವಾಗಿ ಪತ್ರ ಬರೆದಿದ್ದ ಪರಿಣಾಮವಾಗಿ ಅ.18ಕ್ಕೆ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲಿಯವರೆಗೂ ಜನತೆ ಶಾಂತಿ ಕಾಪಾಡಬೇಕಿದೆ ಎಂದು ಗೌಡರು ಕೋರಿದರು. ರಾಷ್ಟ್ರೀಯ ಜಲನೀತಿ ಬಗ್ಗೆ ಮಾತನಾಡಿದ ದೇವೇಗೌಡರು, ರಾಷ್ಟ್ರೀಯ ಜಲನೀತಿ ಎಂದರೆ ಕರ್ನಾಟಕ, ತಮಿಳುನಾಡು ಸರ್ಕಾರಗಳು ಸೇರಿಕೊಂಡು ರಚಿಸಲು ಆಗುವುದಿಲ್ಲ. ರಾಷ್ಟ್ರೀಯ ಜಲನೀತಿಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಒಗ್ಗೂಡಿ ತೀರ್ಮಾನ ತೆಗೆದುಕೊಳ್ಳಬೇಕು. ಅದು ಸುಲಭದ ಮಾತಲ್ಲ. ಏನೂ ತಿಳಿಯದೆ ಹಗುರವಾಗಿ ಮಾತನಾಡಬಾರದು ಎಂದು ಗರಂ ಆದರು.
50:50 ಅನುಪಾತದಲ್ಲಿ ನೀರನ್ನು ಹಂಚಿಕೊಳ್ಳಬೇಕು ಎಂಬ ವಾದದ ಬಗ್ಗೆ ನನಗೂ ಅಸಮಾಧಾನವಿದೆ. ಹಾಗೆಂದು ನಾವು ಹೋರಾಟ, ಪ್ರತಿಭಟನೆಗೆ ಇಳಿದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಅ.18ರಂದು ನಡೆಯಲಿರುವ ವಿಚಾರಣೆಗೆ ತೊಡಕುಂಟಾಗುತ್ತದೆಯೇ ವಿನಃ ಉಪಯೋಗವಾಗುವುದಿಲ್ಲ. ಹಾಗಾಗಿ ಯಾವುದೇ ವಿಷಯಗಳನ್ನು ಅರ್ಥ ಮಾಡಿಕೊಳ್ಳದೆ ಹಗುರವಾಗಿ ಮಾತನಾಡಬಾರದು ಎಂದು ಹೇಳಿದರು.ಇನ್ನು ಹೇಮಾವತಿ ಒಡಲಿನಿಂದ ನೀರನ್ನು ಹರಿಸುವ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಜತೆಗೆ ಬೆಳೆ ಪರಿಹಾರದ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.