ಕಾಶ್ಮೀರದಲ್ಲಿ ಮುಂದುವರಿದ ಹಿಂಸಾಚಾರ : ಸತ್ತವರ ಸಂಖ್ಯೆ 53ಕ್ಕೇರಿದೆ
ಶ್ರೀನಗರ, ಆ.6-ಕಣಿವೆ ರಾಜ್ಯ ಕಾಶ್ಮೀರದಾದ್ಯಂತ ಹಿಂಸಾಚಾರ ಮುಂದುವರೆದಿದ್ದು, ಸತ್ತವರ ಸಂಕ್ಯೆ 53ಕ್ಕೆ ಏರಿದೆ. ಶ್ರೀನಗರದ ಹಜರತ್ಬಾಲ್ ಪ್ರಾರ್ಥನಾ ಮಂದಿರದತ್ತ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ವಿಧಿಸಲಾಗಿದ್ದ ಕಫ್ರ್ಯೂ ಉಲ್ಲಂಘಿಸಿ ಸಾವಿರಾರು ಮಂದಿ ನಿನ್ನೆ ಹಿಂಸಾಚಾರದಲ್ಲಿ ತೊಡಗಿದ್ದರು. ಈ ಘರ್ಷಣೆಯಲ್ಲಿ ಮೂವರು ನಾಗರಿಕರು ಮೃತಪಟ್ಟು 150 ಮಂದಿ ಗಾಯಗೊಂಡರು. ಭಯೋತ್ಪಾದಕ ಬರ್ಹಾನ್ ವಾನಿ ಹತ್ಯೆ ಖಂಡಿಸಿ ಕಳೆದ ಒಂದು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ಭುಗಿಲೆದ್ದಿವೆ. ಇದನ್ನು ಹತ್ತಿಕ್ಕಲು ಕಫ್ರ್ಯೂ ವಿಧಿಸಲಾಗಿದ್ದರೂ ಘರ್ಷಣೆಗಳು ಮುಂದುವರೆದಿವೆ.
ಶ್ರೀನಗರದಲ್ಲಿ ನಿನ್ನೆ ಮತ್ತೆ ಹಿಂಸಾಚಾರ ಉಲ್ಬಣಗೊಂಡಿತ್ತು. ಕಲ್ಲು ತೂರಾಟದಲ್ಲಿ ತೊಡಗಿದ್ದ ಪ್ರತಿಭಟನಾಕಾರರು ಮತ್ತು ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಮತ್ತು ಭದ್ರತಾಪಡೆ ಆಶ್ರುವಾಯು ಸಿಡಿಸಿ, ಗುಂಡು ಹಾರಿಸಿದರು. ಈ ಘಟನೆಯಲ್ಲಿ ಮೂವರು ಹತರಾದರು. 150ಕ್ಕೂ ಅಧಿಕ ಮಂದಿ ಗಾಯಗೊಂಡರು. ಇಂದು ಬೆಳಿಗ್ಗೆಯಿಂದಲೇ ಅಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ.