ಕಿರಿಯ ಎಂಜಿನಿಯರ್ ಎಸಿಬಿ ಬಲೆಗೆ

Eesanje.....

ತುಮಕೂರು, ಸೆ.10- ಸಿವಿಲ್ ಕಾಮಗಾರಿಯ ಬಾಕಿ ಹಣವನ್ನು ಮಂಜೂರು ಮಾಡಲು ಗುತ್ತಿಗೆದಾರನಿಂದ 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ಪಾವಗಡ ಪುರಸಭಾ ಕಾರ್ಯಾಲಯದ ಕಿರಿಯ ಎಂಜಿನಿಯರ್ ಪ್ರಕಾಶ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೀಸಿದ ಬಲೆಯಲ್ಲಿ ಬಿದ್ದಿದ್ದಾರೆ.  ತುಮಕೂರು ಜಿಲ್ಲೆಯ ಪಾವಗಡ ಪುರಸಭೆಯಿಂದ ಮಂಜೂರಾದ ಸಿವಿಲ್ ಕಾಮಗಾರಿಗಳನ್ನು ಮುಕ್ತಾಯಗೊಳಿಸಿದ್ದ ಗುತ್ತಿಗೆದಾರರೊಬ್ಬರು, ಸದರಿ ಕಾಮಗಾರಿಗಳಿಗೆ ಸಂಬಂಧಿಸಿದ 30 ಲಕ್ಷ ರೂ. ಬಿಡುಗಡೆ ಮಾಡಲು ಪಾವಗಡದ ಪುರಸಭಾ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ, ಪಾವಗಡ ಪುರಸಭೆ ಕಾರ್ಯಾಲಯದ ಕಿರಿಯ ಎಂಜಿನಿಯರ್ ಕೆ.ಎಂ.ಪ್ರಕಾಶ್ ಎಂಬುವರು ಈ ಕಾಮಗಾರಿಗೆ ಸಂಬಂಧಿಸಿದ ಒಟ್ಟು ಮೊತ್ತ 30 ಲಕ್ಷ ರೂ. ಪೈಕಿ 15 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿ ಉಳಿದ 15 ಲಕ್ಷ ರೂ. ಬಿಡುಗಡೆ ಮಾಡದೆ ಕಡತವನ್ನು ಬಾಕಿಯಿಟ್ಟಿದ್ದರು.

 

ಈ ಬಗ್ಗೆ ಗುತ್ತಿಗೆದಾರರು ಪ್ರಕಾಶ್ ಅವರನ್ನು ವಿಚಾರಿಸಿದಾಗ ತಮಗೆ 7 ಲಕ್ಷ ರೂ. ಲಂಚ ನೀಡಿದರೆ ಮಾತ್ರವೇ ಉಳಿದ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.ಅದರಂತೆ ಗುತ್ತಿಗೆದಾರರು 3 ಲಕ್ಷ ರೂ. ಹಣವನ್ನು ಕಂತಿನ ರೂಪದಲ್ಲಿ ಪ್ರಕಾಶ್ ಹಾಗೂ ಇವರ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಿಯಾಜ್ ಎಂಬುವರಿಗೆ ನೀಡಿದ್ದರು.  ಆದರೆ, ಉಳಿದ 4 ಲಕ್ಷ ರೂ. ಲಂಚದ ಮೊತ್ತವನ್ನು ನೀಡುವವರೆಗೂ ಸಿವಿಲ್ ಕಾಮಗಾರಿಯ ಬಾಕಿ ಹಣವನ್ನು ಮಂಜೂರು ಮಾಡುವುದಿಲ್ಲವೆಂದು ಪ್ರಕಾಶ್ ತಿಳಿಸಿದ್ದರಿಂದ ಬೇಸತ್ತ ಗುತ್ತಿಗೆದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪ್ರಕಾಶ್ ವಿರುದ್ಧ ದೂರು ನೀಡಿದ್ದರು.ದೂರುದಾರರು ನೀಡಿದ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ಮಾಡಿದಾಗ 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಪ್ರಕಾಶ್ ಇವರ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಕಿರಿಯ ಎಂಜಿನಿಯರ್ ಪ್ರಕಾಶ್ ಹಾಗೂ ಇವರ ಸಹಾಯಕ ರಿಯಾಜ್ ವಿರುದ್ಧ ಭ್ರಷ್ಟಾಚಾರ ತಡೆಕಾಯ್ದೆಯಡಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Sri Raghav

Admin