ಕುಂದಾನಗರಿಗೆ ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಭಾರೀ ಭದ್ರತೆ
ಬೆಳಗಾವಿ, ಡಿ.17- ಕಾಂಗ್ರೆಸ್ ಯುವನಾಯಕ, ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಬೆಳಗಾವಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಆಗಮನದ ಹಿನ್ನೆಲೆಯಲ್ಲಿ ಕುಂದಾನಗರಿಯಲ್ಲಿ ಭಾರೀ ಭದ್ರತೆ ಕಂಡುಬಂತು. ಈ ಕಾರ್ಯಕ್ರಮವನ್ನು ರಾಜ್ಯ ಕಾಂಗ್ರೆಸ್ ಸವಾಲಾಗಿ ಸ್ವೀಕರಿಸಿದೆ. ಕಾರ್ಯಕ್ರಮದ ಯಶಸ್ವಿಗೆ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವತಃ ದೇಶದ ಪ್ರಧಾನಿ ನರೇಂದ್ರಮೋದಿ ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಕಾಣದಷ್ಟು ಬಿಗಿ ಭದ್ರತೆ ಮತ್ತು ವಿಶೇಷತೆ ರಾಹುಲ್ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಕಂಡುಬಂತು. ಮೋದಿ ಕಾರ್ಯಕ್ರಮ ನಡೆದ ನೆಹರು ನಗರ ಜಿಲ್ಲಾ ಕ್ರೀಡಾಂಗಣದ ಅದೇ ಸ್ಥಳದಲ್ಲಿ ಈಗ ಕಾಂಗ್ರೆಸ್ ಕಾರ್ಯಕರ್ತರ ಪುನಶ್ಚೇತನ ಸಮಾವೇಶ ನಡೆಯಲಿದ್ದು, ಇದರ ಯಶಸ್ವಿಗೆ ಇಡೀ ರಾಜ್ಯ ಸರ್ಕಾರವೇ ಟೊಂಕಕಟ್ಟಿ ನಿಂತಿದ್ದು ಕಂಡುಬಂತು.
ನಗರ ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್ ನೇತೃತ್ವದಲ್ಲಿ ಸುಮಾರು 11 ಎಸ್ಪಿಗಳು ಭದ್ರತೆಯ ಜವಾಬ್ದಾರಿ ಹೊತ್ತಿದ್ದಾರೆ. ರಾಹುಲ್ಗಾಂಧಿ ಮಧ್ಯಾಹ್ನ 2ಕ್ಕೆ ಬೆಳಗಾವಿಗೆ ಆಗಮಿಸುವವರಿದ್ದರೂ ಬೆಳಗ್ಗೆಯಿಂದಲೇ ಇಡೀ ನೆಹರು ನಗರದ ಸುತ್ತ ಕಿರಿಕಿರಿ ಎನ್ನುವಷ್ಟರ ಮಟ್ಟಿಗೆ ಪೊಲೀಸ್ ಭದ್ರತೆ ಹೆಚ್ಚಿಸಿರುವುದು ಜನತೆಗೆ ಬೇಸರ ಮೂಡಿಸಿದೆ. ರಾಹುಲ್ಗಾಂಧಿ ಆಗಮನದ ಮುನ್ನಾ ದಿನ ನಿನ್ನೆಯೇ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕೀಹೊಳಿ, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಎಚ್.ಎಂ.ರೇವಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಹಿರಿಯ ಮುಖಂಡರು ಹಾಜರಿದ್ದು, ಸಮಾರಂಭದ ಸಿದ್ಧತೆ ಪರಿಶೀಲಿಸಿದರು.
ಇಂದು ಬೆಳಗ್ಗೆ ಬಾಂಬ್ಸ್ಕ್ವಾಡ್ ತಂಡ ಹಲವು ಸುತ್ತಿನ ಭದ್ರತಾ ತಪಾಸಣೆ ನಡೆಸಿತು. ಬೆಳಗಾವಿ ಜಿಲ್ಲೆ ಹಾಗೂ ಸುತ್ತಲಿನ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು, ವಾಹನಗಳು ಕಾಂಗ್ರೆಸ್ ಸಮಾವೇಶಕ್ಕೆ ಹರಿದುಬಂದವು. ನೆಹರು ನಗರದ ಬಳಿಯ ಕೆಪಿಟಿಸಿಎಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಎಲ್ಲರ ಚಿತ್ತ ರಾಹುಲ್ ಆಗಮನದ ಮೇಲೆ ನೆಟ್ಟಿತ್ತು.
Eesanje News 24/7 ನ್ಯೂಸ್ ಆ್ಯಪ್ – Click Here to Download