ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ

ತುಮಕೂರು,ನ.9- ಜಿಲ್ಲೆಯ 10 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆ ತಾಲ್ಲೂಕುಗಳಿಗೆ ಕುಡಿಯುವ ನೀರಿನ ತೊಂದರೆಯಾಗದ ರೀತಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು. ಬೆಳಗಾವಿಯಿಂದ ಬೆಂಗಳೂರಿಗೆ ಬರುವ ವೇಳೆ ತುಮಕೂರು ಪ್ರವಾಸಿ ಮಂದಿರದಲ್ಲಿ ಕೆಲ ಸಮಯ ತಂಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೇಸಿಗೆ ದಿನಗಳು ಸಮೀಪಿಸುತ್ತಿದ್ದು, ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವ ತೊಂದರೆಯೂ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಅವರು ಈಗಾಗಲೇ ಈ ಕುರಿತಂತೆ ವರದಿ ನೀಡಿದ್ದು, ಕುಡಿಯುವ ನೀರು ಪೂರೈಕೆಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಗುಬ್ಬಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಘಟಕ ನಿರ್ಮಿಸಲು ಸೂಕ್ತ ಜಾಗ ನೀಡುವಂತೆ ಜಿಲ್ಲಾ ಪಂಚಾಯ್ತಿಗೆ ಸೂಚಿಸಿರುವುದಾಗಿ ತಿಳಿಸಿದರು. ಮಾಜಿ ಸಂಸದ ಜಿ.ಎಸ್.ಬಸವರಾಜ್, ಉದ್ಯಮಿ ಎನ್.ಎಸ್.ಜಯಕುಮಾರ್, ತಾಲ್ಲೂಕು ಪಂಚಾಯ್ತಿ ಇಒ ನಾಗಣ್ಣ , ರವಿಶಂಕರ್ ಮತ್ತಿತರರು ಇದ್ದರು. ಬಿಜೆಪಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಎಚ್.ಕೆ.ಪಾಟೀಲ್ ಅವರು 40 ನಿಮಿಷಕ್ಕೂ ಹೆಚ್ಚು ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ್ದು , ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರೀ ಕುತೂಹಲ ಕೆರಳಿಸಿದೆ.

► Follow us on –  Facebook / Twitter  / Google+

Sri Raghav

Admin