ಕುಣಿಗಲ್ ಮತ್ತು ಮಂಡ್ಯದಲ್ಲಿ ಇಬ್ಬರು ರೈತರು ಆತ್ಮಹತ್ಯೆ

Former-Suicide-e01

ಮಂಡ್ಯ/ಕುಣಿಗಲ್, ಫೆ.21- ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಕುಣಿಗಲ್ ಮತ್ತು ಮಂಡ್ಯದಲ್ಲಿ ಇಬ್ಬರು ರೈತರು ಸಾಲಬಾಧೆ, ಬೆಳೆನಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಡ್ಯ ವರದಿ:
ಸಾಲಬಾಧೆಯಿಂದ ಬೇಸತ್ತ ರೈತನೋರ್ವ ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ದೊಡ್ಡಗರುಡನಹಳ್ಳಿ ನಿವಾಸಿ ಉಮಾಶಂಕರ್ (32) ಆತ್ಮಹತ್ಯೆ ಮಾಡಿಕೊಂಡ ರೈತ.  ಬೆಳೆಗಾಗಿ ಬ್ಯಾಂಕ್ ಮತ್ತು ಇನ್ನಿತರ ಸಂಘ-ಸಂಸ್ಥೆಗಳಿಂದ ಸುಮಾರು 2 ಲಕ್ಷ ರೂ. ಹಣ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ತೀರಿಸಲಾಗದೆ ಕಳೆದ ಎರಡು ದಿನಗಳ ಹಿಂದೆಯೇ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದರು.   ಇದನ್ನು ಗಮನಿಸಿದ ಮನೆಯವರು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಉಮಾಶಂಕರ್ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.  ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕುಣಿಗಲ್ ವರದಿ:
ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದು, ನೀರು ಬರದ ಹಿನ್ನೆಲೆಯಲ್ಲಿ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಬೋರನಪಾಳ್ಯ ಗ್ರಾಮದ ನಿವಾಸಿ ಶಿವಣ್ಣ (50) ಆತ್ಮಹತ್ಯೆ ಮಾಡಿಕೊಂಡ ರೈತ. ಈತನಿಗೆ ಎರಡು ಎಕರೆ ಹೊಲವಿದ್ದು, ಅದರಲ್ಲಿ ಮೊನ್ನೆ ಕೊಳವೆ ಬಾವಿ ಕೊರೆಸಿದ್ದಾನೆ. ಆದರೆ,  ಕೊಳವೆಬಾವಿಯಲ್ಲಿ ನೀರು ಬಂದಿರಲಿಲ್ಲ. ಈ ಬಾರಿ ತೀವ್ರ ಬರಗಾಲದಿಂದಾಗಿ ರಾಗಿ ಬೆಳೆಯಲ್ಲೂ ನಷ್ಟ ಉಂಟಾಗಿತ್ತು.

ಬೆಳೆ ಬೆಳೆಯಲು, ಕೊಳವೆ ಬಾವಿ ಕೊರೆಸಲು ಎಸ್‍ಬಿಎಂ ಬ್ಯಾಂಕ್‍ನಿಂದ 2 ಲಕ್ಷ, ಐಪಿಎಫ್ ಮತ್ತು ಸ್ತ್ರೀ ಶಕ್ತಿ ಸಂಘ ಇತರೆ ಕೈ ಸಾಲಗಳಿಂದ 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ, ಸಾಲ ತೀರಿಸಲಾಗದೆ ಬೇಸತ್ತ ರೈತ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin