ಕುಪ್ವಾರಾದ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ : ಕ್ಯಾಪ್ಟನ್ ಸೇರಿ ಮೂವರು ಯೋಧರು ಹುತಾತ್ಮ
ಶ್ರೀನಗರ, ಏ.27-ಹಿಂಸಾಚಾರ ಪೀಡಿತ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ಉತ್ತರ ಕಾಶ್ಮೀರದ ಕುಪ್ವಾರಾದ ಸೇನಾ ನೆಲೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ಫಿದಾಯೀನ್ (ಆತ್ಮಾಹುತಿ) ದಾಳಿಯಲ್ಲಿ ಕ್ಯಾಪ್ಟನ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಭದ್ರತಾ ಪಡೆಗಳು ನಡೆಸಿದ ಪ್ರತಿ ದಾಳಿಯಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಇರುವ ಚೌಕಿಬಾಲ್ನ ಪಂಜ್ಗಾಂವ್ನಲ್ಲಿ ಇಂದು ಮುಂಜಾನೆ 4ರ ಸಮಯದಲ್ಲಿ ಈ ಘಟನೆ ನಡೆದಿದೆ. ಆತ್ಮಾಹತ್ಯಾ ದಳದ ಉಗ್ರಗಾಮಿಗಳು ಸೇನಾ ಶಿಬಿರಕ್ಕೆ ನುಗ್ಗಿ ನಡೆಸಿದ ದಾಳಿಯಲ್ಲಿ ಕ್ಯಾಪ್ಟನ್ ಆಯುಷ್ ಹಾಗೂ ಇನ್ನಿಬ್ಬರು ಯೋಧರು ಹುತಾತ್ಮರಾದರು. ಜೈಷ್-ಇ-ಮಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದೆ.
ಈ ಪ್ರದೇಶದಲ್ಲಿ ಪ್ರಮುಖ ರಸ್ತೆಗಳ ಪಹರೆಗೆ ನಿಯೋಜನೆಗೊಂಡಿದ್ದ ಬೆಟಾಲಿಯನ್ ಕ್ಯಾಂಪ್ ಮೇಲೆ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಹಠಾತ್ ದಾಳಿ ನಡೆಸಿ ಗುಂಡು ಹಾರಿಸಿದರು. ಫಿದಾಯೀನ್ ಆಕ್ರಮಣದಲ್ಲಿ ಕ್ಯಾಪ್ಟನ್ ಆಯುಷ್ ಮತ್ತು ಇನ್ನಿಬ್ಬರು ಯೋಧರು ಮೃತಪಟ್ಟರು ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಮೃತ ಉಗ್ರರಿಂದ ಶಸ್ತ್ರಾಸ್ತ್ರಗಳು, ಸಂವಹನ ಸಾಧನಗಳು, ನಕ್ಷೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುಂಡಿನ ಚಕಮಕಿ ವೇಳೆ ಪರಾರಿಯಾಗಿರುವ ಉಗ್ರರಿಗಾಗಿ ಆ ಪ್ರದೇಶದ ಸುತ್ತಮುತ್ತ ಯೋಧರು ತೀವ್ರ ಶೋಧ ನಡೆಸುತ್ತಿದ್ದಾರೆ. ಉರಿ ಸೇನಾ ನೆಲೆ ಮೇಲೆ ಕಳೆದ ವರ್ಷ ಉಗ್ರಗಾಮಿಗಳು ನಡೆಸಿದೆ ಇದೇ ರೀತಿಯ ದಾಳಿಯಲ್ಲಿ 19 ಯೋಧರು ಹುತಾತ್ಮರಾಗಿದ್ದರು.
< Eesanje News 24/7 ನ್ಯೂಸ್ ಆ್ಯಪ್ >