ಕೂಂಬಿಂಗ್ ವೇಳೆ ವೀರಮರಣವನ್ನಪಿದ ಸಿಆರ್ಪಿಎಫ್ ಪತ್ತೆದಾರಿ ಶ್ವಾನ
ರಾಯ್ಪುರ, ಏ.8- ಛತ್ತೀಸ್ಗಡದ ನಕ್ಸಲ್ ಪೀಡಿತ ಪ್ರದೇಶವಾದ ಬಿಜಾಪುರ ಜಿಲ್ಲೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದ ಪರಿಣಾಮ ಸಿಆರ್ಪಿಎಫ್ಗೆ ಸೇರಿದ ಪತ್ತೆದಾರಿ ಶ್ವಾನ ವೀರಮರಣವನ್ನಪಿದೆ. ಘಟನೆಯಲ್ಲಿ ಈ ಶ್ವಾನವನ್ನು ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಗೆ ಗಾಯವಾಗಿದೆ. ಸಿಆರ್ಪಿಎಫ್ನ 170ನೇ ಬೆಟಾಲಿಯನ್ ಸಿಬ್ಬಂದಿ ಮೊದಕಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸಿಆರ್ಪಿಎಫ್ ಕ್ಯಾಂಪ್ಗಿಂತ 2 ಕಿ ಲೋ ಮೀಟರ್ ಹಿಂದೆ ಬಾಂಬ್ ಪತ್ತೆ ಮಾಡುವ ಕ್ರ್ಯಾಕರ್ ಹೆಸರಿನ ಶ್ವಾನವು ಐಇಡಿ ಸ್ಪೋಟಕ ಪತ್ತೆ ಮಾಡಿತ್ತು.
ಬಹುಶಃ ಪತ್ತೆ ಮಾಡುವ ವೇಳೆ ಉಂಟಾದ ಕೆಲ ಚಲನೆಯಿಂದಾಗಿ ಐಇಡಿ ಸ್ಫೋಟಗೊಂಡಿದ್ದು, ಶ್ವಾನ ಕ್ರ್ಯಾಕರ್ ಸ್ಥಳದಲ್ಲೇ ಸಾವಿಗೀಡಾಗಿದೆ. ಈ ಶ್ವಾನವನ್ನು ನಿರ್ವಹಣೆ ಮಾಡುತ್ತಿದ್ದ ಬಿ ಭಾನುಪ್ರಕಾಶ್ ರೆಡ್ಡಿ ಎಂಬುವರು ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕ್ರ್ಯಾಕರ್, ಬೆಲ್ಕಯಂ ಶೆಪರ್ಡ್ ತಳಿಯ ಶ್ವಾನವಾಗಿದ್ದು, 2015ರ ಡಿಸೆಂಬರ್ನಲ್ಲಿ ಸಿಆರ್ಪಿಎಫ್ಗೆ ನಿಯುಕ್ತಿಗೊಂಡಿತ್ತು.
< Eesanje News 24/7 ನ್ಯೂಸ್ ಆ್ಯಪ್ >