ಕೃಷಿಕರು ಸಿರಿಧಾನ್ಯಗಳಿಗೆ ಒತ್ತು ನೀಡಿ
ತುಮಕೂರು,ಆ.8-ನಮ್ಮ ನಾಡಿನ ಸಂಪತ್ತು, ಆರೋಗ್ಯ ವೃದ್ದಿಗೆ ಸಹಕಾರಿಯಾದ ಅಮೂಲ್ಯ ಬೆಳೆಗಳಾದ ಸಿರಿಧಾನ್ಯಗಳು ಇಂದು ಇಲ್ಲವಾಗುತ್ತಿರುವುದು ಬೇಸರ ಸಂಗತಿಯಾಗಿದೆ ಎಂದು ತುಮಕೂರು ವಿವಿಯ ಕುಲಪತಿ ಪ್ರೊ .ಎ.ಎಚ್.ರಾಜಾಸಾಬ್ ವಿಷಾದ ವ್ಯಕ್ತಪಡಿಸಿದರು. ತುಮಕೂರು ವಿವಿಯಲ್ಲಿ ಆಯೋಜಿಸಿದ್ದ ಕೊರಲೆ ಸಿರಿಧಾನ್ಯ ಕುರಿತ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳು ರೈತರಿಗೆ ಬದುಕನ್ನು ಕಲ್ಪಿಸಿ, ಉತ್ತಮ ಆರೋಗ್ಯ ಕೊಡುತ್ತಿದ್ದ ಲಾಭದಾಯಕ ಬೆಳೆಗಳು ಇಂದು ಕಣ್ಮರೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು. ನವಣೆ, ಜೋಳ, ಸಜ್ಜೆ , ಕೊರಲೆ, ಸಾವೇ, ಹರಕ, ಅರಗ ಬೆಳೆಗಳು ಇವೆಲ್ಲವೂ ಮನುಷ್ಯನಿಗೆ ರೋಗ ನಿರೋಧಕ ಶಕ್ತಿಯುಳ್ಳ ಬೆಳೆಗಳಾಗಿದ್ದವು. ಆದರೆ ಪ್ರಸ್ತುತ ಇಂತಹ ಬೆಳೆಗಳು ಕೈಗೆ ಸಿಗದೆ ಕಣ್ಮರೆಯಾಗುತ್ತಿವೆ. ಈ ಬೆಳೆಗಳನ್ನು ರೈತರು ಉಳಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ತುಮಕೂರು ಜಿಲ್ಲೆ ಸಿರಿಧಾನ್ಯಗಳ ರಾಜಧಾನಿ ಎಂದರೆ ತಪ್ಪಾಗಲಾರದು. ರಾಜ್ಯ ಸರ್ಕಾರವೂ ಕೂಡ ಸಿರಿಧಾನ್ಯಗಳಿಗೆ ಉತ್ತಮ ಬೆಲೆ ನಿಗದಿ ಮಾಡಿ ರೈತರಿಗೆ ಉತ್ತೇಜನ ನೀಡಬೇಕು ಎಂದರು. ಈ ಸಂದರ್ಭದಲ್ಲಿ ನಬಾರ್ಡ್ನ ಅಭಿವೃದ್ದಿ ವ್ಯವಸ್ಥಾಪಕ ವೀರಭದ್ರನ್, ಕೃಷ್ಣಪ್ರಸಾದ್, ಕೊರಲೆ ಪುಸ್ತಕದ ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ, ಡಾ.ಅರುಂಧತಿ, ನಿತ್ಯಾನಂದ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.