ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ ಚಿರತೆ ದಾಳಿ
ಮೈಸೂರು, ಮಾ.30- ಹೊಲದಲ್ಲಿ ಕೆಲಸ ಮಾಡುವಾಗ ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ರೈತ ಗಾಯಗೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.ತಾಲ್ಲೂಕಿನ ಅನಗಟ್ಟಿ ಗ್ರಾಮದ ಮಹದೇವಸ್ವಾಮಿ(29) ಗಾಯಗೊಂಡಿರುವ ರೈತ.ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿ ನಿನ್ನೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ರೈತನ ಕೈ, ಬೈನ್ನಿಗೆ ಗಾಯವಾಗಿದೆ.ಅಕ್ಕಪಕ್ಕದ ಜಮೀನಿನಲ್ಲಿದ್ದವರು ರೈತ ಮಹದೇವಸ್ವಾಮಿಯನ್ನು ಚಿರತೆ ದಾಳಿಯಿಂದ ರಕ್ಷಿಸಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಳೆದ 15 ದಿನಗಳ ಹಿಂದಷ್ಟೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿತ್ತು. ಇದರಿಂದ ಆ ಭಾಗದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದರು. ಈಗ ಚಿರತೆ ರೈತನ ಮೇಲೆ ದಾಳಿ ನಡೆಸಿರುವುದು ಗ್ರಾಮಸ್ಥರದಲ್ಲಿ ಭಯ, ಆತಂಕ ಮೂಡಿಸಿದೆ.ಗ್ರಾಮದ ಬಳಿ ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >