ಕೃಷ್ಣಾನದಿ ನೀರು ಹಂಚಿಕೆ : ತೆಲಂಗಾಣ ಅರ್ಜಿ ವಜಾ, ನ್ಯಾಯಾಧಿಕರಣದ ತೀರ್ಪು ಎತ್ತಿಹಿಡಿದ ಸುಪ್ರೀಂ
ನವದೆಹಲಿ, ಜ.9- ಕೃಷ್ಣಾನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಇಂದು ತಳ್ಳಿ ಹಾಕಿದೆ. ಆಂಧ್ರ ವಿಭಜನೆಯ ನಂತರ ತಮ್ಮ ರಾಜ್ಯಕ್ಕೆ ಬರುತ್ತಿದ್ದ ಕರ್ನಾಟಕದ ಕೃಷ್ಣಾನದಿ ನೀರು ಮರು ಹಂಚಿಕೆಯಾಗಬೇಕು. ಆಂಧ್ರಕ್ಕೆ ಬರುವಂತೆ ನಮಗೂ ಕೃಷ್ಣಾನದಿ ನೀರಿನಲ್ಲಿ ಪಾಲು ಬರಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರು ನ್ಯಾಯಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಮುಖ್ಯಮಂತ್ರಿಯ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧಿಕರಣ ಕೃಷ್ಣಾನದಿ ನೀರು ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ನಡುವೆ ಈ ಹಿಂದೆಯೇ ಹಂಚಿಕೆಯಾಗಿದೆ. ಈಗ ತೆಲಂಗಾಣ ವಿಭಜನೆಯಾಗಿರುವುದರಿಂದ ಈಗ ಮತ್ತೆ ಅದನ್ನು ಪುನರ್ ಹಂಚಿಕೆ ಮಾಡುವ ಅಗತ್ಯವಿಲ್ಲ. ಕರ್ನಾಟಕಕ್ಕೂ ತೆಲಂಗಾಣಕ್ಕೂ ಸಂಬಂಧವಿಲ್ಲ.
ಈಗೇನಿದ್ದರೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವೆ ನೀರಿನ ಹಂಚಿಕೆಯಾಗಬೇಕು. ಇದನ್ನು ನೀವೇ ಬಗೆಹರಿಸಿಕೊಳ್ಳಬೇಕು. ಕರ್ನಾಟಕದಿಂದ ಪಾಲು ಕೇಳುವ ಅಧಿಕಾರ ತೆಲಂಗಾಣಕ್ಕಿಲ್ಲ ಎಂದು ನ್ಯಾಯಾಧಿಕರಣ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈಗ ಸುಪ್ರೀಂಕೋರ್ಟ್ ನ್ಯಾಯಾಧಿಕರಣದ ತೀರ್ಪನ್ನು ಎತ್ತಿ ಹಿಡಿದು ತೆಲಂಗಾಣದ ಮನವಿಗೆ ತಿರಸ್ಕರಿಸಿದೆ.