ಕೆಆರ್‍ಎಸ್ ನಿರ್ಮಾಣದ ಹಿಂದಿನ ರೋಚಕ ಇತಿಹಾಸ ಇಲ್ಲಿದೆ ಓದಿ

Spread the love

KRS

ಕಾವೇರಿ ನೀರಿನ ವಿಚಾರದಲ್ಲಿ ಇತ್ತೀಚೆಗಷ್ಟೇ ಮಾತ್ರ ನಮಗೆ ಅನ್ಯಾಯವಾಗಿಲ್ಲ. ಸುಮಾರು 730 ವರ್ಷಗಳಿಂದಲೂ ಅನ್ಯಾಯ ಆಗುತ್ತಲೇ ಇದೆ. ಕಾವೇರಿ ಹುಟ್ಟುವುದೇ ನಮ್ಮ ರಾಜ್ಯದ ಮಂಜಿನ ನಗರಿ ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಭಾಗಮಂಡಲದ ತಲಕಾವೇರಿಯಲ್ಲಿ. ಕಾವೇರಿಯ ಉಪನದಿ ಮೈಸೂರು ಜಿಲ್ಲೆ ಹುಣಸೂರು ಬಳಿ ಹುಟ್ಟುವ ಲಕ್ಷ್ಮಣತೀರ್ಥ. ಕಾವೇರಿ ನದಿ ಹರಿದು ಅನುಪಯುಕ್ತವಾಗಿ ಸಮುದ್ರ ಸೇರುತ್ತಿದ್ದುದನ್ನು ನೋಡಿ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟೆ ಕಟ್ಟಿಸಿ ನೀರು ಸಂಗ್ರಹ ಮಾಡಬೇಕೆಂದು ಕನಸು ಕಂಡಿದ್ದರು. ಈ ಕನಸನ್ನು ನನಸು ಮಾಡಲು ತಮ್ಮ ಖಜಾನೆಯಲ್ಲಿದ್ದ ಬೆಳ್ಳಿ ನಾಣ್ಯಗಳು, ಕುಟುಂಬ ಸದಸ್ಯರ ಆಭರಣ ಮಾರಿ ಹಣ ಹೊಂದಿಸಿಕೊಟ್ಟಿದ್ದರು. ಕೆಆರ್‍ಎಸ್ ನಿರ್ಮಾಣದಲ್ಲಿ ಸಾವಿರಾರು ಮಂದಿ ಕಾರ್ಮಿಕರ ಪರಿಶ್ರಮ ಅಡಗಿದೆ. ಅಂದು ಕೇವಲ ಸುಣ್ಣ ಮತ್ತು ಮರಳು ಮಿಶ್ರಣದಿಂದ ವಿಶ್ವವೇ ತಿರುಗಿನೋಡುವಂತೆ ಅದ್ಭೂತ ಅಣೆಕಟ್ಟೆ ನಿರ್ಮಿಸಲಾಗಿದೆ.

ಹೊಯ್ಸಳರ ಕಾಲದಲ್ಲೇ ಕಾವೇರಿಯ ಮೇಲೆ ತಮಿಳರು ಹಕ್ಕು ಸಾಧಿಸಿದ್ದರು. 1150-60ರಲ್ಲಿ ಹೊಯ್ಸಳ ಚಕ್ರವರ್ತಿ ಮೊದಲ ನರಸಿಂಹ ಕನ್ನಡನಾಡಿನ ಕೆಲವು ಭಾಗ ಆಳುತ್ತಿದ್ದಾಗ ಕಾವೇರಿ ನೀರನ್ನು ತನ್ನ ರಾಜ್ಯದಲ್ಲಿ ಕೃಷಿಗೆ ಬಳಸಿಕೊಳ್ಳಲು ಯತ್ನಿಸಿದ್ದ, ಅದಕ್ಕಾಗಿ ನೀರನ್ನು ಕೃಷಿ ಭೂಮಿಯತ್ತ ತಿರುಗಿಸಲು ಕಟ್ಟೆ ಕಟ್ಟಿಸಿದ್ದ. ಇದನ್ನರಿತ ಚೋಳ ಅರಸ 2ನೇ ರಾಜರಾಜ ಚೋಳನ್ ಸೇನೆ ಸಹಿತ ಬಂದು ಕಟ್ಟೆ ಒಡೆದ ಎಂಬುದು ಪಿರ್‍ಕಾಲ ಚೋಳರ್ ವರಲಾರು ಎಂಬ ತಮಿಳು ಗ್ರಂಥದಲ್ಲಿ ದಾಖಲಾಗಿದೆ. ಈ ವ್ಯಾಜ್ಯದಲ್ಲಿ ಕಾವೇರಿ ಎಳೆ ಇರುವುದನ್ನು ಇತಿಹಾಸ ತಜ್ಞ ಪೆÇ್ರ.ಪಿ.ವಿ.ನಂಜರಾಜೇಅರಸು ಶೋಧಿಸಿದ್ದಾರೆ.

1804-07ರ ವೇಳೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಸಾಕು ತಾಯಿ ಮಹಾರಾಣಿ ಲಕ್ಷ್ಮಮ್ಮಣಿ ಸಾಗರಕಟ್ಟೆ ಎಂಬ ಊರಿನ ಸಮೀಪ ಅಂದರೆ ಈಗಿರುವ ಕನ್ನಂಬಾಡಿ ಕಟ್ಟೆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಹೊಸ ಕಟ್ಟೆ ನಿರ್ಮಿಸಲು ಮುಂದಾದಾಗ ತಂಜಾವೂರಿನ ರೈತರು ಪ್ರತಿಭಟಿಸಿದ್ದರಂತೆ. ಮೈಸೂರಿನ ಭಾಗದ ಜನರಿಗೂ ಕೃಷ್ಣರಾಜ ಸಾಗರಕ್ಕೂ ಅವಿನಾಭಾವ ಸಂಬಂಧವಿದೆ. ಈಗ ಬಣಗುಡುತ್ತಿರುವ ಅಣೆಕಟ್ಟೆಯನ್ನು ನೋಡಿ ಮನಸು ದುಗುಡವಾಗುತ್ತದೆ. ಕಷ್ಟಪಟ್ಟು ಅಣೆಕಟ್ಟೆ ಕಟ್ಟಿಸಿ ಎಲ್ಲರ ಮನ ಗೆದ್ದ ಕೃಷ್ಣರಾಜ ಒಡೆಯರ ಹೆಸರನ್ನೇ ಈ ಅಣೆಕಟ್ಟಿಗೆ ಇಡಲಾಗಿದೆ. ಈಗಿನ ಪರಿಸ್ಥಿತಿಯನ್ನು ಕಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆತ್ಮ ದುಃಖಿಸುತ್ತಿದೆಯೋ ಏನೋ?

ಕೆಆರ್‍ಎಸ್ ಕುರಿತು ಅರಸು ಮನೆತನದ ಹಿರಿಯರು ಇತಿಹಾಸ ತಜ್ಞರೂ ಆದ ಪ್ರೋ.ಪಿ.ವಿ.ನಂಜರಾಜೇಅರಸ್ ಅವರು ಈ ಸಂಜೆಯೊಂದಿಗೆ ಮಾತನಾಡಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ 1884ರ ಜೂ.4ರಂದು ಜನಿಸಿದರು. ಅವರ ತಂದೆ ಕಾಲವಾದುದರಿಂದ ಕೇವಲ 10ನೆ ವಯಸ್ಸಿನಲ್ಲಿ 1895ರಲ್ಲಿ ಪಟ್ಟಾಭಿಷಕ್ತರಾದರು. ಅವರ ಮಾತೃಶ್ರೀ ಮಹಾರಾಣಿ ವಾಣಿವಿಲಾಸ ಸನ್ನಿಧಾನದವರು ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ನಿರ್ವಹಣೆ ಕಲಿಸಿದ್ದರಿಂದ ಅವರು ಅತ್ಯುತ್ತಮ ಆಡಳಿತಗಾರರೂ, ದೂರದೃಷ್ಟಿಯುಳ್ಳ ಮಹಾರಾಜರಾದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಮನದಲ್ಲಿ ಕಾವೇರಿಗೆ ಕಟ್ಟೆ ಕಟ್ಟುವ ಯೋಚನೆ ಬಂದೊಡನೆ ತಮ್ಮ ದಿವಾನರಿಗೆ ಹೇಳಿ ದ್ದರು. ಆಗ ಚೀಫ್ ಇಂಜಿನಿಯರ್ ಮೆಕ್ ಹಚಿನ್‍ಗೆ ವಿಷಯ ತಿಳಿಸಿದ್ದರು. ಅವರು ಇಂಜಿನಿಯರ್ ಇಕೊಲಸ್ ಬರ್ನಾಲ್ಡ್ ಎಡ್ವಿನ್‍ದಾಸ್‍ಗೆ ಪ್ಲ್ಯಾನ್ ಸಿದ್ಧಪಡಿಸಲು ಸೂಚಿಸಿದರು. ಎಡ್ವಿನ್‍ದಾಸ್ 1908ರ ಏ.25ರಲ್ಲಿ ನಕ್ಷೆ ಸಿದ್ಧಪಡಿಸಿ ರಾಜರಿಗೆ ನೀಡಿದರು. ಆಗ 168 ಲಕ್ಷ ರೂ. ವೆಚ್ಚದೊಂದಿಗೆ 3 ಲಕ್ಷ ಎಕರೆಗೆ ನೀರಾವರಿ ಯೋಜನೆಗೆ ಪ್ಲ್ಯಾನ್ ಸಿದ್ಧವಾಗಿತ್ತು. ಜತೆಗೆ ಶಿಂಷಾ ವಿದ್ಯುತ್ ಅನ್ನು 70 ಸಾವಿರ ಅಶ್ವಶಕ್ತಿಗೆ ಹೆಚ್ಚಿಸಬೇಕು ಎಂಬುದು ಕೂಡ ದಾಸ್ ಇಚ್ಛೆಯಾಗಿತ್ತು. ಎಡ್ವಿನ್ ದಾಸ್ ಹಾಗೂ ಚೀಫ್ ಇಂಜಿನಿಯರ್ ಮೆಕ್‍ಹಚಿನ್ ಶ್ರೀರಂಗಪಟ್ಟಣ ಸಮೀಪ 8 ಕಿಲೋ ಮೀಟರ್ ದೂರದಲ್ಲಿ ಕಟ್ಟೆ ಕಟ್ಟಲು ಜಾಗ ಗುರುತಿಸಿದರು. ಆಗ ಭೂಗರ್ಭ ಶಾಸ್ತ್ರಜ್ಞರಾಗಿದ್ದ ಡಬ್ಲ್ಯು.ಎಫ್.ಸ್ಮಿತ್ ಇದನ್ನು ಸರ್ಟಿಫೈ ಮಾಡಿದ್ದರು.

ಪ್ಲ್ಯಾನ್‍ಏನೋ ಸಿದ್ಧವಾಯಿತು. ಮೊದಲನೆ ಹಂತದಲ್ಲಿ 70 ಅಡಿ ನೀರು ಸಂಗ್ರಹ, 2ನೆ ಹಂತದಲ್ಲಿ 115 ಅಡಿ ನೀರು ಸಂಗ್ರಹದ ದೂರಾಲೋಚನೆ ಇಂಜಿನಿಯರ್‍ಗಳದ್ದು. ಆದರೆ ಬ್ರಿಟೀಷರು ಒಡೆದು ಆಳುವ ನೀತಿಗೆ ನಮ್ಮ ರಾಜ್ಯ ಆಗಲೇ ಬಲಿಪಶುವಾಗಿತ್ತು. ಮದ್ರಾಸ್ ಸರ್ಕಾರ ಎರಡೂ ಹಂತಗಳಿಗೆ ಒಟ್ಟೊಟ್ಟಿಗೆ ಅನುಮತಿ ಕೊಡಲಿಲ್ಲ. ಮೊದಲ ಹಂತಕ್ಕೆ ಮಾತ್ರ ಅನುಮತಿ ದೊರಕಿತ್ತು. ಶಿಂಷಾದಿಂದ ಕೋಲಾರದ ಚಿನ್ನದ ಗಣಿಗೆ ವಿದ್ಯುತ್ ಕೊಡಲು ಅದಾಗಲೇ ಒಪ್ಪಂದ ಆಗಿದ್ದುದರಿಂದ ವಿದ್ಯುತ್ ಉತ್ಪಾದನೆ ಅನಿವಾರ್ಯವಾಗಿತ್ತು. ಈಗನ ಕೆಆರ್‍ಎಸ್ ಸಮೀಪವೇ ಇದ್ದ ಕೃಷ್ಣರಾಜ ಕಟ್ಟೆಯಿಂದ ಪೈಪ್ ಮೂಲಕ ಶಿಂಷಾಗೆ ನೀರು ಕೊಡಲು ಇಂಜಿನಿಯರ್‍ಗಳು ನಿರ್ಧರಿಸಿದ್ದರು. 1909 ಜುಲೈ 29ರ ರಾತ್ರಿ ಪ್ರವಾಹದಿಂದ ಬಂದು ಪೈಪ್ ಹಾಳಾಗಿತ್ತು. ಅದನ್ನು ರಿಪೇರಿ ಮಾಡಲು ಅಂಧಕಾರದಲ್ಲೇ ಎಡ್ವಿನ್‍ದಾಸ್ ತನ್ನ ಏಳು ಮಂದಿ ಸಹಾಯಕರೊಂದಿಗೆ ತೆಪ್ಪದಲ್ಲಿ ಬರುತ್ತಿದ್ದಾಗ ತೆಪ್ಪ ಮಗುಚಿ ಎಲ್ಲರೂ ನೀರಿನಲ್ಲಿ ಮುಳುಗಿದ್ದರು. ಆರು ಮಂದಿ ಬಚಾವಾದರೆ ಒಬ್ಬ ಮಾತ್ರ ಸಿಲುಕಿದ್ದ. ಆತನನ್ನು ಕಾಪಾಡಲು ಹೋದ ದಾಸ್ ಅಲ್ಲೇ ದುರಂತ ಸಾವನ್ನಪ್ಪಿದರು. ಆಗಿನ್ನು ಆತನಿಗೆ ಕೇವಲ 31 ವರ್ಷ. ಕರ್ನಾಟಕಕ್ಕೆ ನೀರು ಸಂಗ್ರಹಿಸಲು ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಿಸಲು ಪ್ಲಾನ್ ಹಾಕಿದವರಲ್ಲಿ ಒಬ್ಬರಾದ ಎಡ್ವಿನ್‍ದಾಸ್ ಹೀಗೆ ಸಾವು ಕಾಣಬೇಕಾಯಿತು.

ದಾಸ್ ಮೃತಪಟ್ಟ ನಂತರ ವಿಶ್ವೇಶ್ವರಯ್ಯ ಅವರನ್ನು ಮೈಸೂರಿಗೆ ಕರೆಸಿಕೊಳ್ಳಲಾಯಿತು. ಅವರು ದಾಸ್ ಹಾಗೂ ಹಚಿನ್ ಸಿದ್ಧಪಡಿಸಿದ್ದ ಪ್ಲ್ಯಾನ್ ಅನ್ನು ರಿವೈಸ್ ಮಾಡಿ 1911ಮೇ 5 ರಂದು ಮದ್ರಾಸ್ ಸರ್ಕಾರಕ್ಕೆ ವರದಿ ಕೊಟ್ಟರು. ಆಗ ಲಾರ್ಡ್ ಕಬ್ಬನ್ ಮೈಸೂರು ಕಮೀಷನರ್ ಆಗಿದ್ದರು. ಕಡೆಗೆ ಮೊದಲ ಹಂತಕ್ಕೆ ಅನುಮತಿ ಸಿಕ್ಕಿತು. ಎರಡನೇ ಸ್ಟೇಜ್ ಅನ್ನೂ ಸೇರಿಸಿಕೊಂಡು ಕೆಆರ್‍ಎಸ್‍ಗೆ ಅಡಿಪಾಯ ಹಾಕಲಾಯಿತು. ಆದರೆ 1909ರಿಂದ 1912ರವರೆಗೆ ಇದ್ದರು. ಈ ವೇಳೆ ಅವರು ದಿವಾನ್ ಕೂಡ ಆಗಿದ್ದರು. ವಿಶ್ವೇಶ್ವರಯ್ಯ ಅವರು ಕೇವಲ ಒಂದು ವರ್ಷ ಮಾತ್ರ ಚೀಫ್ ಇಂಜಿನಿಯರ್ ಆಗಿ ಕೆಆರ್‍ಎಸ್ ನೋಡಿಕೊಂಡರು. ಒಂದನೆ ಹಂತ 1924ರಲ್ಲಿ ಮುಕ್ತಾಯವಾಯಿತು. 2ನೆ ಹಂತ 1924ರಲ್ಲಿ ಪ್ರಾರಂಭವಾಗಿ 1931ರಲ್ಲಿ ಪೂರ್ಣ ಗೊಂಡಿತು. ವಿಶ್ವೇಶ್ವರಯ್ಯ ಅವರ ನಂತರ ಫಸ್ಟ್ ಸ್ಟೇಜ್, 2ನೆ ಸ್ಟೇಜ್ ಮುಕ್ತಾಯವಾಗುವ ವೇಳೆಗೆ ಏಳು ಮಂದಿ ಚೀಫ್ ಇಂಜಿನಿಯರ್‍ಗಳು ಇದ್ದರು.

ಕರ್ಪೂರ ಶ್ರೀನಿವಾಸರಾವ್ 1912ರಿಂದ 1917, ನಂತರ ಟಿ.ಸುಬ್ಬರಾವ್, ಎಸ್.ಕಡಂಬಿ, ಕೃಷ್ಣ ಅಯ್ಯಂಗಾರ್, ಜಾನ್‍ಭೋರ್, ಕೆ.ಆರ್.ಶೇಷಾಚಾರ್ ನಂತರ 1931 ರಿಂದ 1934ರವರೆಗೆ ಶ್ರೀನಿವಾಸ್ ಅಯ್ಯರ್ ಚೀಫ್ ಇಂಜಿನಿಯರ್‍ಗಳಾಗಿದ್ದರು. ಆದರೆ ವಿಶ್ವೇಶ್ವರಯ್ಯ ಅವರ ಹೆಸರು ರಾರಾಜಿಸಿತೇ ಹೊರತು ಉಳಿದ ಏಳು ಮಂದಿ ಬಗ್ಗೆ ಯಾರೂ ಚಕಾರವೆತ್ತಲಿಲ್ಲ ಎಂದು ನಂಜರಾಜೇ ಅರಸ್ ಬೇಸರಪಟ್ಟರು. ಟಿ.ಆನಂದರಾವ್, ವಿಶ್ವೇಶ್ವರಯ್ಯ, ಎಂ.ಕಾಂತರಾಜ ಅರಸು, ಎ.ಆರ್.ಬ್ಯಾನರ್ಜಿ, ಮಿರ್ಜಾ ಇಸ್ಮಾಯಿಲ್ ಮೈಸೂರಿನ ದಿವಾನರಾಗಿದ್ದರು. ಇನ್ನು ನೀರಿನ ವಿಷಯದಲ್ಲಿ ಶತಮಾನಗಳಿಂದ ನಮಗೆ ಅನ್ಯಾಯವಾಗುತ್ತಾ ಬಂದಿದೆ. ಈ ವರ್ಷ ಸರಿಯಾಗಿ ಮಳೆ ಬಂದಿಲ್ಲ. ಎಲ್ಲೆಲ್ಲೂ ಬರ ಪರಿಸ್ಥಿತಿ ಇದೆ. ಕೆಆರ್‍ಎಸ್‍ನಲ್ಲಿ ನೀರಿಲ್ಲದೆ ಬರಡು ನೆಲ ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಸುಪ್ರೀಂಕೋರ್ಟ್ ನೀರು ಬಿಡಲೇಬೇಕೆಂದು ಅದೇಶಿಸಿರುವುದು ಸೂಕ್ತವೇ ಅಲ್ಲ ಎನ್ನುತ್ತಾರೆ ನಂಜರಾಜೇ ಅರಸು.
ಪಾಲಿ ನಾರಿಮನ್ ಈ ಮೊದಲು ಜಯಲಲಿತಾಗೆ ಲಾಯರ್ ಆಗಿದ್ದವರು. ಅವರು ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬುದರಲ್ಲಿ ನಂಬಿಕೆ ಇಲ್ಲ. ನಿಜವಾಗಲೂ ನಾರಿಮನ್ ಹಾಗೂ ಅವರ ತಂಡದವರಿಗೆ ನ್ಯಾಯಾಂಗದ ಮೇಲೆ ಗೌರವ ಇದ್ದರೆ ಆತ್ಮಾಭಿಮಾನ ಇದ್ದಿದ್ದರೆ ಈಗಾಗಲೆ ವಾದ ಕೈಬಿಟ್ಟು ನಿರ್ಗಮಿಸಬೇಕಿತ್ತು ಎನ್ನುತ್ತಾರೆ ಅರಸು. ನಮ್ಮ ಜಲಾಶಯದಲ್ಲಿ ನೀರು ಎಷ್ಟಿದೆ ಎಂಬುದನ್ನು ಹಾಗೆಯೇ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಎಷ್ಟು ನೀರಿದೆ ಎಂಬುದನ್ನು ತಜ್ಞ ಇಂಜಿನಿಯರುಗಳಿಂದ ಪರಿಶೀಲಿಸಿ ನಂತರ ತೀರ್ಪು ಕೊಡಬೇಕಿತ್ತು. ಮೆಟ್ಟೂರಿನಲ್ಲಿ 40 ಟಿಎಂಸಿ ನೀರಿದೆ. ಸಾಕಷ್ಟು ಅಂತರ್ಜಲವೂ ಇದೆ. ಅದನ್ನು ಸದ್ಯಕ್ಕೆ ಬಳಸುವಂತೆ ಆದೇಶಿಸಬಹುದಿತ್ತು. ನಮ್ಮ ರಾಜ್ಯದ ಪರವಾಗಿ ವಕೀಲರು ಸರಿಯಾಗಿ ವಾದವನ್ನೇ ಮಾಡಿಲ್ಲ. ಹಾಗಾಗಿ ನಮಗೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ನಂಜರಾಜ ಅರಸು ಅಭಿಪ್ರಾಯಪಟ್ಟಿದ್ದಾರೆ. ನಾರಿಮನ್ ನ್ಯಾಯ ಕೊಡಿಸಿಲ್ಲ:ಆಗಿನ ಸಂದರ್ಭದಲ್ಲಿ ಭಾರತ ಸರ್ಕಾರದಲ್ಲಿ ಪ್ರಮುಖ ಡ್ಯಾಂಗಳನ್ನು ಕಟ್ಟಿದ ಹಸರು ಹೇಳಲು ಇಚ್ಛಿಸದ ಚೀಫ್ ಇಂಜಿನಿಯರ್ ಕೂಡ, ಪಾಲಿ ನಾರಿಮನ್ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಲಿಲ್ಲ. ತೀರ್ಪು ಕೊಟ್ಟಿರುವುದೇ ತಪ್ಪು ಎಂದು ಹೇಳಿದ್ದಾರೆ.
ನಮ್ಮ ಕಾವೇರಿ ಬಗ್ಗೆ ನಾರಿಮನ್‍ಗೆ ಏನು ಗೊತ್ತು? ನಮಗೆ ಕುಡಿಯಲು ನೀರಿಲ್ಲ. ಬೇರೆ ರಾಜ್ಯಕ್ಕೆ ಹೇಗೆ ಬಿಡುವುದು. ಇದು ಪ್ರೈಮರಿ ಶಾಲೆ ಮಕ್ಕಳಿಗೂ ಗೊತ್ತಾಗುತ್ತದೆ. ವಕೀಲರಿಗೆ ತಿಳಿಯುವುದಿಲ್ಲವೇ ಎಂದು ಅವರು ಆಕ್ರೋಶ ಪಟ್ಟಿದ್ದಾರೆ.
ಕೆಆರ್‍ಎಸ್ ಅನ್ನು 1911-32ರ ವೇಳೆ ಕೇವಲ ಸುಣ್ಣ- ಮರಳು ಮಿಶ್ರಣದಿಂದ ಕಟ್ಟಲಾಗಿದೆ. ನಾವು ಕಟ್ಟೆ ಕಟ್ಟಿದರೆ ಕಾವೇರಿ ನೀರು ಆ ರಾಜ್ಯಕ್ಕೆ ಹರಿಯುವುದು ಕಡಿಮೆಯಾಗುತ್ತದೆ ಎಂದು ಶತಮಾನದಿಂದಲೂ ತಮಿಳಿಗರು ಕ್ಯಾತೆ ತೆಗೆಯುತ್ತಾ ಬಂದಿದ್ದಾರೆ. ಅಂದಿನಿಂದ ಇಂದಿನವರೆಗೂ ನಮಗೆ ಅನ್ಯಾಯವಾಗಿದೆ. ನಾವು ತಲೆ ಬಗ್ಗಿಸಿಕೊಂಡೇ ಬಂದಿದ್ದೇವೆ. ನಮಗೆ ನ್ಯಾಯಸಿಗುವುದು ಯಾವಾಗ ಎಂದು ಪ್ರಶ್ನಿಸುತ್ತಾರೆ ಅವರು. ಇನ್ನು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಒಂದು ಗ್ಲಾಸ್ ನೀರು ಬೇಕಾದರೂ ಮಂಡಳಿಯವರ ಅನುಮತಿ ಕೇಳಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಮೊದಲು ಇಂಜಿನಿಯರ್‍ಗಳು, ಟೆಕ್ನಿಷಿಯನ್‍ಗಳು ಎರಡೂ ರಾಜ್ಯಗಳಲ್ಲಿ ನೀರಿನ ಪ್ರಮಾಣವನ್ನು ಸಂಪೂರ್ಣವಾಗಿ ಪರಿಶೀಲಿಸಿ ಕೋರ್ಟ್‍ಗೆ ವರದಿ ಕೊಡಬೇಕು. ಆನಂತರ ಸುಪ್ರೀಂ ತೀರ್ಪು ನೀಡುವುದು ಒಳ್ಳೆಯದೆಂದು ಅಭಿಪ್ರಾಯಪಟ್ಟಿದ್ದಾರೆ. ನಮ್ಮಲ್ಲಿ ಹುಟ್ಟಿ ನಮ್ಮ ನಾಡಲ್ಲಿ ಹರಿದು ಸಮುದ್ರ ಸೇರುವ ಕಾವೇರಿ ನೀರಿನ್ನು ನಾವು ಬಳಸಲು ಅನುಮತಿ ಪಡೆಯ ಬೇಕಾಗುವುದು ನಿಜಕ್ಕೂ ನಮ್ಮ ದೌರ್ಭಾಗ್ಯ, ದುರಂತ.

  • ಅಮೃತವರ್ಷಿಣಿ
Facebook Comments

Sri Raghav

Admin