ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ನವಜಾತ ಶಿಶು ಅಪಹರಣ

Spread the love

KGF--01

ಕೆಜಿಎಫ್, ಫೆ.24- ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಅಪರಿಚಿತ ಮಹಿಳೆಯೊಬ್ಬರು ನವಜಾತ ಶಿಶುವನ್ನು ಅಪಹರಣ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಘಟನೆಯ ವಿವರ:
ಚಲ್ದಿಗಾನ ಹಳ್ಳಿಯ ನಿವಾಸಿಯಾದ ಮಾಲಾ ಎಂಬುವರು ಗುರುವಾರ ರಾತ್ರಿ ಹೆರಿಗೆಗಾಗಿ ಕೆಜಿಎಫ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು , ಶುಕ್ರವಾರ ಬೆಳಗ್ಗೆ 7.30 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶುಕ್ರವಾರ ರಾತ್ರಿ ಅಲ್ಲೇ ಮುಕ್ತವಾಗಿ ತಿರುಗಾಡುತ್ತಿದ್ದ ಮಹಿಳೆ ಆಗಾಗ್ಗೆ ಬಂದು ಮಗುವನ್ನು ನೋಡಿಕೊಂಡು ಹೋಗುತ್ತಿದ್ದಳು. ಆಕೆಯ ನಡವಳಿಕೆ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ವಿಚಾರಣೆ ನಡೆಸಿರಲಿಲ್ಲ. ಇಂದು ಮುಂಜಾನೆ 2 ಗಂಟೆವರೆವಿಗೂ ಬಾಣಂತಿ ಮಾಲಾರವರ ತಾಯಿ ಪುಣ್ಯವತಿ ಮಗುವನ್ನು ನೋಡಿಕೊಂಡು ಇದ್ದರು. ನಂತರ ಅವರು ಮಲಗಿದರು. ಬೆಳಿಗ್ಗೆ 4 ಗಂಟೆ ಸಮಯದಲ್ಲಿ ಮಗುವನ್ನು ನೋಡಿದಾಗ ಮಗು ನಾಪತ್ತೆಯಾಗಿತ್ತು.

ಸುಮಾರು 50 ವರ್ಷ ಮಹಿಳೆಯೊಬ್ಬರು ಕಳೆದ ಎರಡು ದಿನದಿಂದ ಆಸ್ಪತ್ರೆಯಲ್ಲಿಯೇ ಇದ್ದಳು. ಅಲ್ಲಿಯೇ ಮಲಗುತ್ತಿದ್ದಳು ಎಂದು ರೋಗಿಗಳು ತಿಳಿಸಿದ್ದಾರೆ. ಆಸ್ಪತ್ರೆಯ ಅಚ್ಚುಕಟ್ಟಿನ ಜಾಗದಲ್ಲಿ ಕ್ಯಾಮೆರಾ ಇಲ್ಲದೆ ಇರುವುದು ಅಪಹರಣ ಮಾಡಲು ಅನುಕೂಲವಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ಆದ ನಂತರ ಮಗುವನ್ನು ಕೈಯಲ್ಲಿಟ್ಟು ಇನ್ನು ಮುಂದೆ ಮಗುವಿನ ಜವಾಬ್ದಾರಿ ನಿನ್ನದೇ ಎಂದು ಹೇಳಿದ್ದಾರೆ. ಅವರಿಗೆ ಕೇವಲ ದುಡ್ಡು ದುಡ್ಡು ಎನ್ನುತ್ತಿರುತ್ತಾರೆ. ಮಗುವಿನ ಯೋಗಕ್ಷೇಮದ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಎಲ್ಲಾ ರೀತಿಯ ಭದ್ರತೆಗಳನ್ನು ನೀಡಬೇಕು ಎಂದು ಸರ್ಕಾರದ ಆದೇಶಗಳಿದ್ದರೂ ಕರ್ತವ್ಯ ಲೋಪ ತೋರಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಸೇರಿದಂತೆ ಇತರ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ನೆರೆದಿದ್ದ ಸಾರ್ವಜನಿಕರು ಆಗ್ರಹಿಸಿದ್ದಾರೆ.

Sri Raghav

Admin