ಕೆಡಿಪಿ ಸಭೆಯಲ್ಲಿ ಶಾಸಕರಿಂದ ಅಧಿಕಾರಿಗಳಿಗೆ ತರಾಟೆ

kdp
ಹುಣಸೂರು, ಸೆ.7- ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಬಂದರೂ ನಿಮ್ಮಗಳ ನಿರ್ಲಕ್ಷ್ಯದಿಂದಾಗಿ ಯೋಜನೆಗಳು ಸಮಗ್ರ ಜಾರಿಯಾಗುತ್ತಿಲ್ಲ, ಯೋಜನೆಗಳನ್ನು ಕಾರ್ಯರೂಪಕ್ಕೆ ನಿಮಗಾಗಿರುವ ಅಡಚಣೆಯಾದರೂ ಏನು?. ಕಾರ್ಮಿಕ ಇಲಾಖೆ ತಿಂಗಳಿಗೆ ಕನಿಷ್ಟ ನೂರು ಮಂದಿಗಾದರೂ ತನ್ನ ಯೋಜನೆಯನ್ನು ಒದಗಿಸಬೇಕು ತಿಳೀತೆನ್ರೀ? ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಪಿ.ಮಂಜುನಾಥ್‍ರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆ(ಕೆಡಿಪಿ)ಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.ಸರ್ಕಾರದ ಎಲ್ಲ ಇಲಾಖೆಗಳಲ್ಲೂ ವಿವಿಧ ಯೋಜನೆಗಳ ಜಾರಿಗಾಗಿ ಹಣ ಒದಗಿಸುತ್ತಿದ್ದೇನೆ. ಆದರೆ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಾದ ನೀವುಗಳು ಕನಿಷ್ಟ ಕ್ರಿಯಾಯೋಜನೆ ಪ್ರಸ್ತಾವನೆ ಸಲ್ಲಿಸುವ ಅಥವಾ ಯೋಜನೆಯ ಸಮರ್ಪಕ ಜಾರಿಗೆ ಬೇಕಾದ ಅವಶ್ಯಕ್ರಮಗಳನ್ನು ಕೈಗೊಳ್ಳದಿರುವುದೇ ಯೋಜನೆಗಳ ಜಾರಿಯಲ್ಲಿ ವಿಳಂಬವಾಗುತ್ತಿದೆ ಎಂದು ಬೇಸರಿಸಿದರು.
ವಾರ್ಡನ್‍ಗಳ ಕೊರತೆ:

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಒಟ್ಟು 10 ಹಾಸ್ಟೆಲ್‍ಗಳ ಪೈಕಿ 5ರಲ್ಲಿ ವಾರ್ಡ್‍ನ್ ಹುದ್ದೆ ಖಾಲಿಯಿದೆ. ಇದು ಸಮಸ್ಯೆಯನ್ನುಂಟು ಮಾಡುತ್ತಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ ತಿಳಿಸಿದರೆ, ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‍ಗಳಲ್ಲೂ 5 ಮಂದಿ ವಾರ್ಡನ್‍ಗಳ ಕೊರತೆಯಿದೆಯೆಂದು ಅಧಿಕಾರಿ ರಾಣಿ ತಿಳಿಸಿದರು.ಕಾರ್ಮಿಕ ಇಲಾಖೆ ಚುರುಕುಗೊಳಿಸಿ: ಕಾರ್ಮಿಕ ಇಲಾಖೆಯಲ್ಲಿ ಕೇಂದ್ರದ ಅತ್ಯುತ್ತಮ ಯೋಜನೆಗಳಿವೆ. ಕಟ್ಟಡ ಕಾರ್ಮಿಕರನ್ನು ಗುರುತಿಸಿ ನೋಂದಾಯಿಸಿಕೊಳ್ಳುವ ಕ್ರಿಯ ಚುರುಕುಗೊಳಿಸಿ, ಅವರಿಗೆ ಇರುವ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಕೈಗೊಳ್ಳಿರೆಂದು ಕಾರ್ಮಿಕ ನಿರೀಕ್ಷಕ ಜಯಣ್ಣರಿಗೆ ಶಾಸಕರು ಸೂಚಿಸಿದರು.
ಗ್ರಾಮವಿಕಾಸ ಯೋಜನೆ: ತಾಲೂಕಿನ ತಟ್ಟೆಕೆರೆ, ಗೆರಸನಹಳ್ಳಿ, ಗಾಗೇನಹಳ್ಳಿ, ಸಿರೇನಹಳ್ಳಿ ಹಾಗೂ ಹಳೆಪೆಂಜಳ್ಳಿ ಗ್ರಾಮಗಳಿಗೆ ಗ್ರಾಮವಿಕಾಸ ಯೋಜನೆಯಡಿ ತಲಾ 35 ಲಕ್ಷ ರೂ.ಅನುದಾನ ದೊರೆತಿದ್ದು ಗ್ರಾಮದ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದೆಂದು ಶಾಸಕರು ತಿಳಿಸಿದರು.
ಜನರನ್ನು ಗೋಳಾಡಿಸಬೇಡಿ: ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಪ್ರತಿಕಾರ್ಯಕ್ಕೂ ಲಂಚಕ್ಕಾಗಿ ಗೋಳು ಹೊಯ್ಯುತ್ತಿದ್ದಾರೆಂದು ದೂರು ಬಂದಿದೆ. ಇದು ಹೀಗೆ ಮುಂದುವರೆದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿರೆಂದು ಉಪನೋಂದಣಾಧಿಕಾರಿ ನಂದಿನಿಗೆ ಶಾಸಕರು ಗಾಳಿ ಬಿಡಿಸಿದರು.ತಾ.ಪಂ. ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮ್‍ಕುಮಾರ್, ಜಿ.ಪಂ.ಸದಸ್ಯರಾದ ಎಂ.ಬಿ.ಸುರೇಂದ್ರ, ಅನಿಲ್‍ಕುಮಾರ್, ಸಾವಿತ್ರಮ್ಮ ಮಂಜು, ತಹಸೀಲ್ದಾರ್ ಎಸ್.ಪಿ.ಮೋಹನ್, ಇಒ ಸಿ.ಆರ್.ಕೃಷ್ಣಕುಮಾರ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

 

Follow us on –  Facebook / Twitter  / Google+

Sri Raghav

Admin