ಕೆಲವು ಚಿತ್ರಮಂದಿರಗಳಿಂದ ‘ಜಾಗ್ವಾರ್’ ಎತ್ತಂಗಡಿ ಮಾಡಿದ್ದಕ್ಕೆ ಹೆಚ್ಡಿಕೆ ಆಕ್ರೋಶ

Jaguar-Movie

ಬೆಂಗಳೂರು, ಅ.23-ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜಾಗ್ವಾರ್ ಚಿತ್ರವನ್ನು ಕೆಲವು ಚಿತ್ರಮಂದಿರಗಳಿಂದ ತೆಗೆದು ಹಾಕುತ್ತಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಕಲೆಕ್ಷನ್ ಕಡಿಮೆ ಇದ್ದರೆ ಅಂತಹ ಚಿತ್ರವನ್ನು ತೆಗೆದು ಬೇರೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹಾಕುವುದು ಸಾಮಾನ್ಯ. ಓರ್ವ ವಿತರಕನಾಗಿ ನನಗೂ ಆ ಬಗ್ಗೆ ತಿಳಿದಿದೆ. ಆದರೆ ಜನ ಇಷ್ಟಪಟ್ಟು ನೋಡುತ್ತಿರುವ ಜಾಗ್ವಾರ್ ಚಿತ್ರ ಯಶಸ್ವಿಯಾಗಿ ಮುನ್ನುಗುತ್ತಿದೆ. ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಹಾಗಿದ್ದರೂ ಗಾಂಧಿನಗರದಲ್ಲಿ ಚಿತ್ರ ತೆಗೆದು ಹಾಕಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಇದೇ 28ರಂದು ಮುಕುಂದ ಮುರಾರಿ, ಸಂತು ಸ್ಟ್ರೈಟ್ ಫಾವರ್ಡ್ ಚಿತ್ರಗಳು ತೆರೆ ಕಾಣುತ್ತಿದ್ದು, ಇದಕ್ಕಾಗಿ ಉತ್ತಮ ಗಳಿಕೆಯಿಂದ ಜನಮನ್ನಣೆ ನೀಡುತ್ತಿರುವ ಜಾಗ್ವಾರ್ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ. ಇದು ಸರಿಯಲ್ಲ. ನಾವು ಸಹ ಚಿತ್ರ ಬಿಡುಗಡೆ ಮಾಡುವಾಗ ಚಿತ್ರ ಮಂದಿರಗಳನ್ನು ಹುಡುಕಿ ಬಿಡುಗಡೆ ಮಾಡಿದ್ದೆವು ಎಂದರು.  ಗಾಂಧಿನಗರ ಕೆಲವೆ ಕೆಲವು ವಿತರಕರ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಬಹಳಷ್ಟು ವರ್ಷಗಳಿಂದ ಇಲ್ಲಿರುವ ನಮ್ಮಂತವರಿಗೆ ಇಷ್ಟು ತೊಂದರೆ ಕೊಡುತ್ತಿದ್ದಾರೆ ಎಂದರೆ ಸಾಮಾನ್ಯ ನಿರ್ಮಾಪಕರಿಗೆ ಇನ್ನೆಂತಹ ರೀತಿಯಲ್ಲಿ ತೊಂದರೆ ಕೊಡುತ್ತಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇಂತಹ ಪರಿಸ್ಥಿತಿಯಿಂದ ಹೊರಬರಬೇಕಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಹೋರಾಟ ಮಾಡಲು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನ ಮಗನ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ಸಹ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರ್ ಮೈಸೂರು, ರಾಮನಗರ, ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂದಿನ ವಾರದಲ್ಲಿ ಅಮೆರಿಕದಲ್ಲೂ ಚಿತ್ರ ಬಿಡುಗಡೆಯಾಗುತ್ತಿದ್ದು, ಕುಟುಂಬ ಸಮೇತ ಅಲ್ಲಿಗೆ ತೆರಳುತ್ತಿದ್ದೇವೆ. ಅಲ್ಲಿನ ಕನ್ನಡಿಗರು ಚಿತ್ರಪ್ರದರ್ಶನದ ಬಗ್ಗೆ ಉತ್ಸುಕರಾಗಿದ್ದಾರೆ.  ಯುಕೆ, ಆಸ್ಟ್ರೇಲಿಯಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಲ್ಲಿಯೂ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳಿದರು.

ನಿಖಿಲ್ಕುಮಾರ್ನ ಮತ್ತೊಂದು ಚಿತ್ರ ಡಿಸೆಂಬರ್ನಲ್ಲಿ ಆರಂಭವಾಗುತ್ತಿದೆ. ಇದೀಗ ನಿಖಿಲ್ ಟ್ಯಾಲೆಂಟ್ ವೆಬ್ಸೈಟನ್ ಆರಂಭಿಸಿದ್ದು , ಇದರಲ್ಲಿ ನಟನೆ, ನಿರ್ದೇಶನ ಹಾಗೂ ತಾಂತ್ರಿಕ ವರ್ಗದವರಿಗೆ ತರಬೇತಿ ನೀಡಿ ನಮ್ಮ ಚಾನೆಲ್ ಹಾಗೂ ಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವ ನಿಟ್ಟಿನಲ್ಲಿ ಹೊಸ ಸಂಚಲನ ಮೂಡಿಸಲಾಗುತ್ತಿದೆ. ಕಲಾ ಸೇವೆಯೊಂದಿಗೆ ನಿಖಿಲ್ ಚಿತ್ರ ನಿರ್ದೇಶನದತ್ತಲೂ ಆಸಕ್ತಿ ತಳೆದಿದ್ದಾನೆ ಎಂದು ಮಾಹಿತಿ ನೀಡಿದರು.  ನಟರಾದ ಸಂಪತ್, ವಿನಾಯಕ್ ಜೋಷಿ, ಪ್ರಶಾಂತ್ ಸಿದ್ದಿ , ಲಹರಿ ವೇಲು, ಚಿತ್ರದ ಸಹ ನಿರ್ದೇಶಕ ಗುರುರಾಜ್ ದೇಸಯಿ ಮತ್ತಿತರರು ಇದ್ದರು.

► Follow us on –  Facebook / Twitter  / Google+

Sri Raghav

Admin