ಕೆ.ಆರ್.ಮಾರುಕಟ್ಟೆ ನಾಲ್ಕು ದ್ವಾರಗಳಿಗೆ ಮೈಸೂರು ಮಹಾರಾಜರ ಹೆಸರು
ಬೆಂಗಳೂರು, ಅ.29-ನಗರದ ಕೆ.ಆರ್.ಮಾರುಕಟ್ಟೆಯ ನಾಲ್ಕು ದ್ವಾರಗಳಿಗೆ ಮೈಸೂರು ರಾಜ ಮನೆತನದ ನಾಲ್ವರು ಮಹಾರಾಜರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಜಿ.ಪದ್ಮಾವತಿ ಇಂದಿಲ್ಲಿ ತಿಳಿಸಿದರು.ಅಗ್ಲಿ ಇಂಡಿಯಾ ಸ್ವಯಂಸೇವಕರೊಂದಿಗೆ ಇಂದು ಕೆ.ಆರ್.ಮಾರುಕಟ್ಟೆ ಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಾರಂಪರಿಕ ಕೆ.ಆರ್.ಮಾರುಕಟ್ಟೆ ನಿರ್ಮಿಸಿದ ಮೈಸೂರು ಮಹಾರಾಜರ ಮನೆತನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಾರುಕಟ್ಟೆಯ ನಾಲ್ಕು ದ್ವಾರಗಳಿಗೆ ಮಹಾರಾಜರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದರು.
ಯಾವ ದ್ವಾರಗಳಿಗೆ ಯಾವ ಮಹಾರಾಜರ ಹೆಸರಿಡಬೇಕು ಎಂಬ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಅಗ್ಲಿ ಇಂಡಿಯಾ ಸ್ವಯಂ ಸೇವಕರು ಇಡೀ ಮಾರುಕಟ್ಟೆಯನ್ನು ಸುಂದರೀಕರಣಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮುಂದಿನ ತಿಂಗಳಿನೊಳಗೆ ಇಡೀ ಮಾರುಕಟ್ಟೆಯನ್ನು ಸುಂದರ ಪ್ರದೇಶವನ್ನಾಗಿ ರೂಪಿಸಲಾಗುವುದು ಎಂದರು.ಮಾರುಕಟ್ಟೆಯ ಸಂಪೂರ್ಣ ಅಭಿವೃದ್ಧಿಗೆ ಕ್ರಿಯಾಯೋಜನೆಯೊಂದನ್ನು ಸಿದ್ಧಪಡಿಸಲಾಗಿದ್ದು, ಇದಕ್ಕಾಗಿ 25 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ.
ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.ಮೆಟ್ರೋ ನಿಲ್ದಾಣದಿಂದ ಕೆ.ಆರ್.ಮಾರುಕಟ್ಟೆಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆಯೂ ಇದ್ದು, ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಪದ್ಮಾವತಿ ಹೇಳಿದರು. ಈ ಸಂದರ್ಭದಲ್ಲಿ ಉಪಮೇಯರ್ ಆನಂದ್, ಜೆಡಿಎಸ್ ಗುಂಪಿನ ನಾಯಕ ರಮೀಳಾ ಉಮಾಶಂಕರ್ ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರುಗಳು ಹಾಜರಿದ್ದರು.