ಕೆ.ಆರ್. ಮಾರ್ಕೆಟ್’ನಲ್ಲೂ ಇಂದಿರಾ ಕ್ಯಾಂಟೀನ್
ಬೆಂಗಳೂರು,ಜು.14-ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದರು. ಇಂದು ಮಧ್ಯಾಹ್ನ 12 ಗಂಟೆಗೆ ಕೆ.ಆರ್.ಮಾರುಕಟ್ಟೆ ಪ್ರದೇಶಕ್ಕೆ ದೀಢಿರ್ ಭೇಟಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಕೆ.ಆರ್.ಮಾರುಕಟ್ಟೆಯಲ್ಲಿ ನೂರಾರು ವ್ಯಾಪಾರಸ್ಥರು ಇದ್ದಾರೆ. ಹಾಗಾಗಿ ಇಂದಿರಾ ಕ್ಯಾಂಟೀನ್ ಅವಶ್ಯಕತೆಯಿದೆ ಎಂದರು. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರೊಂದಗೆ ಚರ್ಚಿಸಿ ನಂತರ ಕ್ಯಾಂಟೀನ್ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಾರುಕಟ್ಟೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಲವು ಕಡೆ ರಸ್ತೆಗಳು ಗುಂಡಿ ಬಿದ್ದುದ್ದನ್ನು ಗಮನಿಸಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆಗುಂಡಿ ಮುಚ್ಚುವಂತೆ ಆದೇಶ ನೀಡಿದರು.
ಈ ಹಿಂದೆ ಪ್ರತಿನಿತ್ಯದ ಕಸವನ್ನು ಅಂದೇ ತೆರವುಗೊಳಿಸಬೇಕು ಎಂದು ಆದೇಶಿಸಿದ್ದರು. ಅದರನ್ವಯ ಇಂದು ಶೇ.90ರಷ್ಟು ಕಸ ಮಾರುಕಟ್ಟೆಯ ಯಾವುದೇ ಭಾಗದಲ್ಲಿ ಕಂಡುಬಂದಿಲ್ಲ. ಆದರೆ ಎರಡು ಕಡೆ ಕಸದ ರಾಶಿ ಬಿದ್ದಿತ್ತು. ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
ಮಾರುಕಟ್ಟೆಯಾದ್ಯಂತ ಹಳೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದು ಹಾಕಿ ಹೊಸ ಎಲೆಕ್ಟ್ರಿಕ್ ವಸ್ತುಗಳನ್ನು ಅಳವಡಿಸುವಂತೆ ಸೂಚಿಸಿದ ಪದ್ಮಾವತಿಯವರು, ರಸ್ತೆಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಆದ್ದರಿಂದ ರಸ್ತೆಬದಿ ವ್ಯಾಪಾರವನ್ನು ತೆರವುಗೊಳಿಸುವಂತೆ ಈ ಹಿಂದೆ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದ್ದರು. ಇದರಂತೆ ಇಂದು ರಸ್ತೆಬದಿಯ ವ್ಯಾಪಾರಸ್ಥರು ಅಷ್ಟಾಗಿ ಕಂಡುಬರಲಿಲ್ಲ. ಮೇಯರ್ ಅವರು ಪ್ರತಿ ಶನಿವಾರದಂದು ಮಾರುಕಟ್ಟೆ ಪರಿಶೀಲನೆ ನಡೆಸಿದ ಪರಿಣಾಮ ಈಗ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಂಡುಬಂದಿದ್ದು , ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ವ್ಯಾಪಾರಿಗಳಿಗೆ ಮೇಯರ್ ಜಿ.ಪದ್ಮಾವತಿ ತಿಳಿಸಿದರು.
< Eesanje News 24/7 ನ್ಯೂಸ್ ಆ್ಯಪ್ >