ಕೇಂದ್ರ ಸರ್ಕಾರದಿಂದ ಸದ್ಯದಲ್ಲೇ ನೂತನ ಶಿಕ್ಷಣ ನೀತಿ ಜಾರಿ : ಪ್ರಕಾಶ್ ಜಾವ್ಡೇಕರ್

PRakash

ಹುಬ್ಬಳ್ಳಿ,ಅ.28- ಕೇಂದ್ರ ಸರ್ಕಾರವು ಸದ್ಯದಲ್ಲೇ ನೂತನ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲಿದ್ದು , ಈ ಕುರಿತಂತೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ನಡೆದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದರು. ಧಾರವಾಡದಲ್ಲಿ ನೂತನ ಐಐಟಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ ಸಂದರ್ಭ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಮುಂದೆ ಸಾಕಷ್ಟು ಯೋಜನೆಗಳಿವೆ ಎಂದರು.   ಆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದೇ ನಮ್ಮ ಗುರಿ. ಅರ್ಹರೆಲ್ಲರಿಗೂ ಉನ್ನತ ಶಿಕ್ಷಣ ದೊರೆಯಬೇಕು ಎಂಬ ವಿಷಯದಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದ್ದು , ಈ ನೀತಿ ಅನುಷ್ಠಾನಗೊಂಡರೆ ಉನ್ನತ ಶಿಕ್ಷಣ ಕುರಿತ ವಿವಿಧ ರಾಜ್ಯಗಳ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಐಐಟಿ ಸ್ಥಾಪನೆ ಸಂತಸ:

ಧಾರವಾಡದಂತಹ ಸಾಂಸ್ಕೃತಿಕ ನಗರಿಯಲ್ಲಿ ಐಐಟಿ ಉದ್ಘಾಟನೆಯಾಗುತ್ತಿರುವುದು ನಗರಕ್ಕೆ ಹೊಸ ಗರಿ ಮೂಡಿಸಿದಂತಾಗಿದೆ. ಈ ವಿಚಾರ ನನಗೆ ಬಹಳ ಸಂತಸ ತಂದಿದೆ ಎಂದರು.

ಇನ್ನಷ್ಟು ಯೋಜನೆಗಳು:

ಕರ್ನಾಟಕ ರಾಜ್ಯಕ್ಕೆ ಶೀಘ್ರ ಇನ್ನಷ್ಟು ಯೋಜನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಂಡಿದ್ದಾರೆ. ಕಾದು ನೋಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಿಹಿ ಸುದ್ದಿ ನೀಡಲಿದೆ. ಅಲ್ಲದೇ ಧಾರವಾಡ ಐಐಟಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದರು.

ಸ್ವಾತಂತ್ರ ಸೇನಾನಿಗೆ ಸನ್ಮಾನ:

ಪ್ರಧಾನಿ ನರೇಂದ್ರ ಮೊದಿ ಅವರ ದೂರದೃಷ್ಟಿಯಿಂದ ತಿರಂಗಾ ಯಾತ್ರೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ಸೇನಾನಿ ಚನ್ನಮ್ಮ ರತ್ನಕಟ್ಟಿ ಅವರನ್ನು ಸನ್ಮಾನಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಕೇಂದ್ರ ಸರ್ಕಾರ ಗೌರವಿಸುತ್ತಿದೆ ಎಂದು ತಿಳಿಸಿದರು.

ಕ್ರಮಕ್ಕೆ ಆಗ್ರಹ:

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ವಿಚಾರವಾಗಿ ತಪ್ಪಿತಸ್ಥರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸಿಎಂ ಸಿದ್ಧರಾಮಯ್ಯ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ. ದೇಶದ್ರೋಹಿಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಈ ಕುರಿತು ರಾಷ್ಟ್ರೀಯ ತನಿಖಾ ದಳದಿಂದ ತನಿಖೆಗೆ ಆಗ್ರಹಿಸಲಾಗಿದೆ. ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಪ್ರಕರಣದಲ್ಲಿ ಎಬಿವಿಪಿ ವಿದ್ಯಾರ್ಥಿಗಳನ್ನು ಯಾರೂ ತಪ್ಪುದಾರಿಗೆ ಎಳೆದಿಲ್ಲ ಎಂದು ಹೇಳಿದರು.

ಮಹದಾಯಿಗಾಗಿ ಮನವಿ:

ಮಹದಾಯಿ ನದಿ ಜೋಡಣೆ ಹಾಗೂ ಕಳಸಾ ಬಂಡೂರಿ ನಾಲಾ ತಿರುವು ಯೋಜೆನೆಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಧಾರವಾಡದ ಮನ್ಸೂರಮಠದ ಬಸವರಾಜ ದೇವರ ನೇತೃತ್ವದಲ್ಲಿ ಹೋರಾಟಗಾರರು ಜಾವ್ಡೇಕರ್ ಅವರಿಗೆ ಮನವಿ ಸಲ್ಲಿಸಿದರು.   ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ, ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ವಿರಭದ್ರಪ್ಪ ಹಾಲಹರವಿ, ಹುಬ್ಬಳ್ಳಿ-ಧಾರವಾಡ ಮೇಯರ್ ಮಂಜುಳಾ ಅಕ್ಕೂರ, ಉಪಮೇಯರ್ ಲಕ್ಷ್ಮೀ ಉಪ್ಪಾರ ಸೇರಿದಂತೆ ಇತರರಿದ್ದರು.

Sri Raghav

Admin