ಕೇಜ್ರಿವಾಲ್ ವಿರುದ್ಧ ಕ್ರಿಮಿನಲ್ ಮಾನನಷ್ಟ ದಾವೆ ಹೂಡಿದ ಸುಭಾಷ್ ಚಂದ್ರ

Kejriwal

ನವದೆಹಲಿ, ನ.18-ಅಪಾರ ಪ್ರಮಾಣದಲ್ಲಿ ತಾವು ಕಪ್ಪು ಹಣ ಸಂಗ್ರಹಿಸಿಟ್ಟಿರುವುದಾಗಿ ತಮ್ಮ ವಿರುದ್ಧ ಆರೋಪ ಮಾಡಿರುವ ನವದೆಹಲಿ ಮುಖ್ಯಮಂತ್ರಿ ಮತ್ತು ಅಮ್ ಆದ್ಮಿ ಪಕ್ಷದ ಪರಮೋಚ್ಚ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಸ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಡಾ. ಸುಭಾಷ್ ಚಂದ್ರ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‍ನಲ್ಲಿ ಕ್ರಿಮಿನಲ್ ಮಾನನಷ್ಟ ದಾವೆ ಹೂಡಿದ್ದಾರೆ.  ಕಾಳಧನ ಹೊಂದಿರುವುದಾಗಿ ತಮ್ಮ ವಿರುದ್ಧ ಆರೋಪ ಮಾಡುವ ಮೂಲಕ ಕೇಜ್ರಿವಾಲ್ ತಮ್ಮ ವರ್ಚಸ್ಸಿಗೆ ಕುಂದು ಉಂಟು ಮಾಡಿದ್ದಾರೆ ಎಂದು ಅವರು ಮಾನಹಾನಿ ಖಟ್ಲೆಯಲ್ಲಿ ಆರೋಪಿಸಿದ್ದಾರೆ. ಇದರೊಂದಿಗೆ ಎಎಪಿ ನಾಯಕರಿಗೆ ಇನ್ನೊಂದು ಕಾನೂನು ತೊಡಕು ಎದುರಾಗಿದೆ.

ಯಾವ ಯಾವ ಉದ್ಯಮಿಗಳು ಕಾಳಧನವನು ಕೂಡಿಟ್ಟಿದ್ದಾರೆ ಎಂದು ಇತ್ತೀಚಿಗೆ ಪಟ್ಟಿ ಮಾಡಿ ಹೇಳಿದ ಸಂದರ್ಭದಲ್ಲಿ ಕೇಜ್ರಿವಾಲ್, ಜೀ ಟಿವಿ ಸಮೂಹಗಳ ಮುಖ್ಯಸ್ಥರೂ ಆಗಿರುವ ಡಾ.ಸುಭಾಷ್ ಚಂದ್ರ ಅವರ ಹೆಸರನ್ನೂ ಉಲ್ಲೇಖಿಸಿದ್ದರು.  ಈ ಮಾನಹಾನಿ ದಾವೆಯ ವಿಚಾರಣೆ ನಡೆದು ಕೇಜ್ರಿವಾಲ್ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಅವರು ಎರಡು ವರ್ಷ ಜೈಲು ಶಿಕ್ಷೆ ಅನುಭಸಬೇಕಾಗುತ್ತದೆ.  ದೇಶದಲ್ಲಿ ಕಪ್ಪು ಹಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸಾರಿದ್ದ ಸಮರಕ್ಕೆ ಸುಭಾಷ್ ಚಂದ್ರ ಸಂಪೂರ್ಣ ಬೆಂಬಲ ಘೋಷಿಸಿದ್ದರು. ಮೋದಿ ಅವರ ದಿಟ್ಟ ಕ್ರಮವನ್ನು ಎಲ್ಲರೂ ಬೆಂಬಲಿಸಬೇಕು. ಇದರಿಂದ ದೇಶದ ಜನತೆಗೆ ಒಳಿತಾಗಲಿದೆ. ನನ್ನಂತ ಶ್ರೀಮಂತರು ಇದನ್ನು ದ್ವೇಷಿಸಬಹುದು. ಆದರೆ ನಾನು ಎಲ್ಲ ಸಿರಿವಂತರಿಗೆ ಹೇಳಲು ಬಯಸುವುದೇನೆಂದರೆ ನಾವಿನ್ನು ಇದಕ್ಕೆ ಕೊನೆ ಹೇಳೋಣ, ನಾವು ಶುದ್ಧರಾಗಿರೋಣ, ನಾವು ಕಾನೂನುಸಮ್ಮತವಾಗಿ ಸಂಪಾದಿಸಿರುವ ಹಣವನ್ನು ಚೆನ್ನಾಗಿ ಅನುಭವಿಸೋಣ. ಏಕೆಂದರೆ ಕಾನೂನುಬದ್ದ ಸಂಪಾದನೇ ಮಾತ್ರವೇ ನಮಗೆ ನಿಜವಾದ ಸಂತೋಷ ನೀಡುತ್ತದೆ ಎಂದು ಅವರು ಹೇಳಿಕೆ ನೀಡಿದ್ದರು.

ನಮ್ಮ ಯೋಧರು ತಮ್ಮ ಪ್ರಾಣವನ್ನೇ ದೇಶಕ್ಕಾಗಿ ತ್ಯಾಗ ಮಾಡುತ್ತಾರೆ. ಪ್ರಧಾನಿಯವರು ನಮ್ಮಿಂದ ಕೇಳಿರುವುದು ಕೇವಲ 50 ದಿನಗಳ ತ್ಯಾಗ ಮಾತ್ರ.. ನಾನು ದೇಶಕ್ಕಾಗಿ 500 ದಿನಗಳನ್ನು ಬೇಕಾದರೂ ತ್ಯಾಗ ಮಾಡಲು ಬಯಸುತ್ತೇನೆ. ನಿಜಕ್ಕೂ ನಾನು ಸಂತುಷ್ಟ ವ್ಯಕ್ತಿ. ನಮ್ಮ ಸಮೂಹಕ್ಕೆ 500 ರೂ. ಮತ್ತು 1,000 ರೂ. ನೋಟು ರದ್ದತಿಯಿಂದ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದ್ದರು.

► Follow us on –  Facebook / Twitter  / Google+

Sri Raghav

Admin