ಕೇರಳದ ಅನಂತ ಪದ್ಮನಾಭ ದೇಗುಲದಲ್ಲಿ ನಿಗೂಢ ಹಾರುವ ತಟ್ಟೆ ಪತ್ತೆ..!

Spread the love

UFO--01

ತಿರುವನಂತಪುರಂ, ಆ.14-ಪ್ರಾಚೀನ ನಿಗೂಢಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು, ಅಪಾರ ಪ್ರಮಾಣದ ಚಿನ್ನ-ಬೆಳ್ಳಿ ಆಭರಣಗಳು, ಅಮೂಲ್ಯ ನವರತ್ನಗಳು ಪತ್ತೆಯಾದ ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ವಿಶ್ವವಿಖ್ಯಾತ ಅನಂತ ಪದ್ಮನಾಭ ದೇವಾಲಯ ಈಗ ಮತ್ತೊಮ್ಮೆ ಸುದ್ದಿಯಾಗಿದೆ.
ವಿವಾದಗಳು ಮತ್ತು ನಿಗೂಢತೆಗಳಿಂದಾಗಿ ಸದಾ ಕುತೂಹಲದ ಕೇಂದ್ರ ಬಿಂದುವಾಗಿರುವ ಈ ದೇವಸ್ಥಾನ ರಹಸ್ಯ ಖಜಾನೆಯೊಂದರಲ್ಲಿ ಪುರಾತನ ಅಪರಿಚಿತ ಹಾರುವ ತಟ್ಟೆ(ಯುಎಫ್‍ಓ ಅಥವಾ ಫ್ಲೈಯಿಂಗ್ ಸಾಸರ್) ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವನ್ನು ವಿಶ್ವದ ವಿಸ್ಮಯ ಧಾರ್ಮಿಕ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಈ ದೇವಸ್ತಾನದಲ್ಲಿರುವ ಧನ-ಕನಕಗಳ ರಕ್ಷಣೆಗೆ ಗರಿಷ್ಠ ಭದ್ರತೆಯನ್ನು ನಿಯೋಜಿಸಲಾಗಿದೆ. ಈ ದೇಗುಲದಲ್ಲಿ ಒಟ್ಟು ಆರು ಭಂಡಾರಗಳಿವೆ (ಖಜಾನೆಗಳು) ಇವುಗಳು ಎ.ಬಿ.ಸಿ.ಡಿ.ಇ ಮತ್ತು ಎಫ್ ಎಂಬ ಲೇಬಲ್‍ಗಳನ್ನು ಹೊಂದಿವೆ. ಈ ಖಜಾನೆಗಳಲ್ಲಿ ಚಿನ್ನ-ಬೆಳ್ಳಿ ಆಭರಣಗಳು, ಬಂಗಾರದ ನಾಣ್ಯಗಳು, ಅಮೂಲ್ಯ ರತ್ನಗಳು ಮತ್ತು ಹರಳುಗಳನ್ನು ಹೊಂದಿರುವ ಚಿನ್ನದ ಪ್ರತಿಮೆಗಳು, ವಜ್ರ-ವೈಡೂರ್ಯಗಳ ವಿಶಿಷ್ಟ ಪ್ರಭಾವಳಿಗಳು. ಐತಿಹಾಸಿಕ ಮಹತ್ವದ ವಸ್ತುಗಳ ಅಗಾಧ ಭಂಡಾರವೇ ಇದೆ. ಇವುಗಳ ಜೊತೆಗೆ ಅನೇಕ ಸಾರಸ್ಯಕರ ಕಥೆಗಳು ಮತ್ತು ಸಂಗತಿಗಳು ಥಳುಕು ಹಾಕಿಕೊಂಡಿವೆ.

ಈ ಖಜಾನೆಗಳಲ್ಲಿ ಬಿ ಲೇಬಲ್ ಇರುವ ಭಂಡಾರವನ್ನು ದೇವಸ್ಥಾನ ನಿರ್ಮಾಣವಾದ 6ನೇ ಶತಮಾನದಿಂದ ಈವರೆಗೆ ತೆರೆದಿಲ್ಲ ಎಂಬುದು ಮತ್ತೊಂದು ನಿಗೂಢ ಸಂಗತಿ. ಇದನ್ನು ತೆರೆದು ಒಳಗೇನಿದೆ ಎಂಬ ಬಗ್ಗೆ ಪರಿಶೀಲಿಸಿದ ಯಾವುದೇ ಮೌಖಿಕ ಅಥವಾ ಲಿಖಿತ ಮಾಹಿತಿಯೂ ಇಲ್ಲ. ಅಷ್ಟರಮಟ್ಟಿಗೆ ಇದೊಂದು ಚಿದಂಬರ ರಹಸ್ಯವಾಗಿದೆ.  ಕೇರಳ ಹೈಕೋರ್ಟ್ ಆದೇಶದ ಮೇರೆಗೆ ಸೇನಾ ಭದ್ರತೆಯೊಂದಿಗೆ ಬಿ ಗುರುತು ಇರುವ ಕೋಠಿ ಹೊರತುಪಡಿಸಿ ಮಿಕ್ಕೆಲ್ಲಾ ಖಜಾನೆಗಳನ್ನು( 20 ಅಡಿಗಳ ಶಿಲಾ ಬುನಾದಿ ಮೇಲೆ ಅತ್ಯಂತ ಭದ್ರತೆಯೊಂದಿಗೆ ನಿರ್ಮಿಸಲಾಗಿದೆ) ತೆರೆದಾಗ ಇಡೀ ಜಗತ್ತೇ ಬೆಚ್ಚಿ ಬೀಳುವಂಥ ಅಪಾರ ಐಶ್ವರ್ಯದ ರಾಶಿ-ರಾಶಿಗಳು ಪತ್ತೆಯಾಗಿ ದೊಡ್ಡ ಸುದ್ದಿಯಾಗಿತ್ತು.

ಆದರೆ, ಈ ಖಜಾನೆಗಳನ್ನು ತೆರೆದ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ಕೇರಳದ ರಾಜವಂಶಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇವುಗಳನ್ನು ತೆರೆದು ನೋಡಿರುವುದು ವಿಷ್ಣು ಭಗವಾನ್‍ಗೆ ಮಾಡಿರುವ ಅಪಮಾನವಾಗಿದೆ. ಲೋಕಕ್ಕೆ ಕಲ್ಯಾಣ ಮಾಡುವ ಭಗವಂತ ಇದರಿಂದ ಕೋಪಾವಿಷ್ಟನಾಗಿದ್ದಾನೆ ಎಂದು ಆರೋಪಿಸಿದ್ದರು.

ಇತ್ತೀಚೆಗೆ ಸರ್ಕಾರದ ಅಧಿಕಾರಿಗಳು ಮತ್ತು ಆಸ್ಪ್ರಿಯಾದ ಇತಿಹಾಸ ಸಂಶೋಧಕ, ಪತ್ರಕರ್ತರ ಸಮ್ಮುಖದಲ್ಲಿ ಅತಿ ಬಿಗಿ ಭಧ್ರತೆಯ ಬಿ ಕೋಠಿಯನ್ನು ತೆರೆದಾಗ ಅದರಲ್ಲಿ ಅತ್ಯಂತ ನಿಗೂಢ ವಸ್ತುವೊಂದು ಕಂಡುಬಂದಿತು ಎಂದು ವರದಿಯಾಗಿದೆ. ಆಸ್ಟ್ರಿಯಾದ ಇತಿಹಾಸ ತಜ್ಞ ರೀನ್‍ಹಾರ್ಟ್ ಸ್ಮುಯಿಲ್ಲರ್ ಹೇಳುವಂತೆ 30 ಮೀಟರ್ ಉದ್ದ ಹಾಗೂ 10 ಮೀಟರ್ ಅಗಲ ಇರುವ ಈ ಕ್ಯಾಪ್ಸುಲ್ ಪ್ರಾಚೀನ ಕಾಲದ ಹಾರುವ ತಟ್ಟೆಯನ್ನು ಹೋಲುತ್ತದೆ. ಇಂಥ ವಸ್ತು ಈವರೆಗೆ ಎಲ್ಲೂ ಪತ್ತೆಯಾಗಿಲ್ಲ.

4ನೇ ಶತಮಾನದಲ್ಲಿ ಪತ್ತೆಯಾದ ಹಿಂದು ಕಲಾಕೃತಿಯೊಂದರಲ್ಲಿ ದೇವಸ್ಥಾನದ ಮೇಲೆ ಹಾರುತ್ತಿರುವ ವಸ್ತುವನ್ನು ಇದು ಹೋಲುತ್ತದೆ ಎಂದು ಸ್ಮುಯಿಲ್ಲರ್ ಉಲ್ಲೇಖಿಸಿದ್ದಾರೆ.  ಒಟ್ಟಾರೆ ಅನೇಕ ರಹಸ್ಯ ಸಂಗತಿಗಳ ಆಗರವಾಗಿರುವ ಪದ್ಮನಾಭ ದೇವಸ್ಥಾನ ಮುಂದಿನ ದಿನಗಳಲ್ಲಿ ಮತ್ತಷ್ಟು ಕೌತುಕ ಸಂಗತಿಗಳನ್ನು ಬಹಿರಂಗಗೊಳಿಸಿದರೂ ಅಚ್ಚರಿ ಇಲ್ಲ.

Facebook Comments

Sri Raghav

Admin