ಕೇಸರಿ ರುಮಾಲು ತೊಟ್ಟು ಬಿಜೆಪಿ ಸೇರಿದ ಕೆ.ಶಿವರಾಮ್

Spread the love

Rajanath

ಬೆಂಗಳೂರು,ಅ.14-ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಶಿವರಾಮ್ ಇಂದು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ವಿದ್ಯುಕ್ತವಾಗಿ ಬಿಜೆಪಿ ಸೇರ್ಪಡೆಯಾದರು. ನಗರದ ಬಸವನಗುಡಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರ ಸಮ್ಮುಖದಲ್ಲಿ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ಕೆ.ಶಿವರಾಮ್ ಕಮಲ ಮುಡಿಗೇರಿಸಿಕೊಂಡರು. ಈ ಮೂಲಕ ದಲಿತ ಮತಗಳನ್ನು ಸೆಳೆಯಲು ಹಲವು ದಿನಗಳಿಂದ ಹವಣಿಸುತ್ತಿದ್ದ ಕಮಲ ಪಡೆ ಮೊದಲ ಹಂತದಲ್ಲೇ ಕೆ.ಶಿವರಾಮ್ ಅವರಂತಹ ನಾಯಕನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇದೇ ತಿಂಗಳ 17ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಕಾಂಗ್ರೆಸ್‍ನ ಹಿರಿಯ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕೂಡ ಸೆಳೆಯಲು ಪಕ್ಷ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ.

ಶಿವರಾಮ್‍ಗೆ ಉನ್ನತ ಸ್ಥಾನ:

ಪಕ್ಷಕ್ಕೆ ಸೇರ್ಪಡೆಯಾಗಿರುವ ಶಿವರಾಮ್‍ಗೆ ಉನ್ನತ ಸ್ಥಾನ ಸಿಗುವ ಸಂಭವವಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಪರ್ಯಾಯ ನಾಯಕತ್ವ ಹುಟ್ಟು ಹಾಕಿದ್ದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪನವರಿಗೆ, ಪರ್ಯಾಯವಾಗಿ ಕೆ.ಶಿವರಾಮ್ ಅವರಿಗೆ ಬಿಜೆಪಿಯಲ್ಲಿ ಹಿಂದುಳಿದ ಸಮುದಾಯಗಳ ಸಂಘಟನೆಯ ಹೊಣೆಗಾರಿಕೆ ಸಿಗುವ ಸಂಭವವಿದೆ.

ಪಕ್ಷ ಸೇರ್ಪಡೆ ಮುನ್ನವೇ ಯಡಿಯೂರಪ್ಪನವರೊಂದಿಗೆ ಮಾತುಕತೆ ನಡೆಸಿದ್ದ ಕೆ.ಶಿವರಾಮ್ ತಮಗೆ ಹಿಂದುಳಿದ ಅಹಿಂದ ನಾಯಕತ್ವ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು. ಛಲವಾದಿ ಮಹಾಸಭಾದ ಮೂಲಕ ದಲಿತ ಸಮುದಾಯದ ಜೊತೆಗೆ ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವುದಾಗಿ ಆಶ್ವಾಸನೆ ಕೊಟ್ಟಿದ್ದರು.  ಈಗ ಈಶ್ವರಪ್ಪನವರಿಗೆ ಟಾಂಗ್ ಕೊಡಲು ಯಡಿಯೂರಪ್ಪ ಕೆ.ಶಿವರಾಮ್ ಅವರನ್ನು ಹಿಂದುಳಿದ ವರ್ಗಗಳ ನಾಯಕನನ್ನಾಗಿ ಪ್ರತಿಬಿಂಬಿಸಲು ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಘಟನೆ ಮಾಡುವುದರ ಜೊತೆಗೆ ತಮ್ಮ ಸಮುದಾಯ ಹೆಚ್ಚು ಇರುವ ವಿಧಾನಸಭಾ ಕ್ಷೇತ್ರವೊಂದರಲ್ಲಿ ಶಿವರಾಮ್ ಸ್ಪರ್ಧಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದರು, ಶಾಸಕರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಇದ್ದರು.

Shivaram-01

► Follow us on –  Facebook / Twitter  / Google+

Facebook Comments

Sri Raghav

Admin