‘ಕೈ’ಬಿಟ್ಟು ತೆನೆಹೊತ್ತ ಮಾಜಿ ಸಚಿವ ಎಚ್.ವಿಶ್ವನಾಥ್ ಮೇಲೆ ‘ಗುಪ್ತ’ ಕಣ್ಣು..!

JDS-Vishwanath--02

ಬೆಂಗಳೂರು, ಸೆ.2- ಮುಖ್ಯಮಂತ್ರಿ ಸಿದ್ದರಾಮಯ್ಯ ಧೋರಣೆಯಿಂದ ಬೇಸತ್ತು ಜೆಡಿಎಸ್ ಸೇರ್ಪಡೆಗೊಂಡು ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಗುಪ್ತಚರ ವರ್ತುಲಕ್ಕೆ ಸಿಲುಕಿಕೊಂಡಿದ್ದಾರೆಯೇ? ವಿಶ್ವನಾಥ್ ಹೇಳುವ ಪ್ರಕಾರ ಗುಪ್ತಚರ ಇಲಾಖೆ ಅಧಿಕಾರಿಗಳು ಅವರ ಚಲನ-ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.  ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗುಪ್ತಚರ ದಳದ ಪ್ರಮುಖರಿಗೆ ತಮ್ಮ ಮೇಲೆ ಕಣ್ಣಿಟ್ಟು ಚಲನ ವಲನಗಳನ್ನು ಗಮನಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.

ವಿಶ್ವನಾಥ್ ಜೆಡಿಎಸ್ ಸೇರ್ಪಡೆ ನಂತರ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆಯುತ್ತಿದ್ದು , ಆ ಭಾಗದ ಹಲವಾರು ಕುರುಬ ಮತ್ತು ಹಿಂದುಳಿದ ಮುಖಂಡರು ತೆನೆ ಪಕ್ಷದತ್ತ ಮುಖ ಮಾಡಿರುವುದು ಕಾಂಗ್ರೆಸ್‍ಗೆ ಇರಿಸು ಮುರಿಸು ಉಂಟು ಮಾಡಿದೆ. ಹೀಗಾಗಿ ವಿಶ್ವನಾಥ್ ಅವರ ಮೇಲೆ ಹದ್ದಿನ ಕಣ್ಣಿಡುವಂತೆ ಗುಪ್ತಚರ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.  ವಿಶ್ವನಾಥ್ ಅವರು ಪ್ರತಿನಿತ್ಯ ಯಾವ ಯಾವ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ? ಯಾವ ಪ್ರಮುಖರನ್ನು ಜೆಡಿಎಸ್‍ನತ್ತ ಸೆಳೆಯುತ್ತಿದ್ದಾರೆ. ಅವರ ದೈನಂದಿನ ಚಟುವಟಿಕೆಗಳೇನು ಎಂಬ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹುಣಸೂರು ವಿಧಾನಸಭಾ ಕ್ಷೇತ್ರದಿಂದ ವಿಶ್ವನಾಥ್ ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿದ್ದೆಗೆಡಿಸಿದೆ. ಹೀಗಾಗಿ ಅವರ ಚಲನ-ವಲನಗಳ ಮೇಲೆ ಕಣ್ಣಿಟ್ಟು ಅವರನ್ನು ಮಣಿಸಿ ಮೈಸೂರಿಗೆ ನಾನೇ ಅಧಿಪತಿ ಎಂಬುದನ್ನು ಸಾಬೀತುಪಡಿಸುವ ಇರಾದೆ ಮುಖ್ಯಮಂತ್ರಿಗಳದ್ದು ಎನ್ನಲಾಗಿದೆ.

Sri Raghav

Admin