‘ಕೈ’ಬಿಟ್ಟ ಶ್ರೀನಿವಾಸ್ ಪ್ರಸಾದ್ : ಸ್ಪೀಕರ್’ಗೆ ಕೈಬರಹದ ರಾಜೀನಾಮೆ ಪತ್ರ ಸಲ್ಲಿಕೆ

Srinivas-Prasad

ಬೆಂಗಳೂರು, ಅ.17-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ದಲಿತ ಸಮುದಾಯದ ಪ್ರಭಾವಿ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಿದರು. ಇಂದು ಮಧ್ಯಾಹ್ನ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಶ್ರೀನಿವಾಸ್‍ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಾವೇ ಅಲ್ಲಿಯೇ ಕುಳಿತು ರಾಜೀನಾಮೆ ಪತ್ರವನ್ನು ಬರೆದು ಕೊಟ್ಟರು. ಈ ಸಂದರ್ಭದಲ್ಲಿ ಸ್ಪೀಕರ್ ಕೋಳಿವಾಡ ಅವರು ನೀವು ರಾಜೀನಾಮೆ ಸಲ್ಲಿಸಲು ಯಾರದೇ ಆಮಿಷ, ಒತ್ತಡ ಅಥವಾ ಬೆದರಿಕೆ ಇದೆಯೇ ಎಂದು ಕೇಳಿದಾಗ, ಇಲ್ಲ ಸ್ವಇಚ್ಛೆಯಿಂದ ಸಲ್ಲಿಸುತ್ತಿರುವುದಾಗಿ ಹೇಳಿದರು.

ಸಚಿವ ಹುದ್ದೆ ಕಳೆದುಕೊಂಡಿದ್ದಕ್ಕೆ ಬೇಸರಗೊಂಡು ರಾಜೀನಾಮೆ ನೀಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಸಚಿವ ಸ್ಥಾನದಿಂದ ತೆಗೆಯುವಾಗ ಮುಖ್ಯಮಂತ್ರಿಗಳು ವಿವೇಚನಾರಹಿತವಾಗಿ ನಡೆದುಕೊಂಡಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ಹೇಳಿದರು. ರಾಜೀನಾಮೆ ಪತ್ರ ಸ್ವೀಕರಿಸಿದ ಸ್ಪೀಕರ್ ಅವರು ನಿಯಮಾವಳಿಗಳ ಪ್ರಕಾರ ರಾಜೀನಾಮೆ ಪತ್ರ ಅಂಗೀಕರಿಸುವುದಾಗಿ ತಿಳಿಸಿದರು.  ಶ್ರೀನಿವಾಸ್‍ಪ್ರಸಾದ್ ಅವರ ರಾಜೀನಾಮೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆಡಳಿತ ಪಕ್ಷದ ಶಾಸಕರೊಬ್ಬರು ಪಕ್ಷದ ವಿರುದ್ಧ ತೊಡೆ ತಟ್ಟಿ ರಾಜೀನಾಮೆ ನೀಡಿರುವ ಪ್ರಸಂಗ ಇದೇ ಮೊದಲು.

ಇದೀಗ ಶ್ರೀನಿವಾಸ್‍ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಇನ್ನು ಆರು ತಿಂಗಳೊಳಗಾಗಿ ಮತ್ತೊಂದು ಮಿನಿ ಮಹಾಸಮರ ಎದುರಾಗಲಿದೆ. ಕೊನೆ ಕ್ಷಣದವರೆಗೂ ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್‍ನಲ್ಲಿ ಉಳಿಸಿಕೊಳ್ಳಲು ಪಕ್ಷದ ಹಿರಿಯ ಮುಖಂಡರು ಭಾರೀ ಹರಸಾಹಸಪಟ್ಟರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವರಾದ ಆಂಜನೇಯ ಸೇರಿದಂತೆ ಅನೇಕರು ನಡೆಸಿದ ಕಸರತ್ತು ಫಲ ಕೊಡಲಿಲ್ಲ.
ತಮ್ಮ ನಿವಾಸದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಶ್ರೀನಿವಾಸ್ ಪ್ರಸಾದ್ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದರು. ಬಳಿಕ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಮೂಲತಃ ಜನಸಂಘದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಶ್ರೀನಿವಾಸ್‍ಪ್ರಸಾದ್ ಸಚಿವರಾಗಿ, ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದಲ್ಲಿ ಓರ್ವ ಪ್ರಭಾವಿ ದಲಿತ ಮುಖಂಡರಾಗಿ ಅವರು ಗುರುತಿಸಿಕೊಂಡಿದ್ದಾರೆ.

ಸ್ಪೀಕರ್ ಕೇಳಿದ ಪ್ರಶ್ನೆಗಳು
ಸ್ಪೀಕರ್ ಕೇಳಿದ ಪ್ರಶ್ನೆಗಳು

ಮತ್ತೊಂದು ಮಿನಿ ಮಹಾಸಮರ :

ಶ್ರೀನಿವಾಸ್‍ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ಮತ್ತೆ ಉಪಚುನಾವಣೆ ಎದುರಾಗಲಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿಗೆ ಉಪಚುನಾವಣೆ ಎದುರಾಗಲಿದೆ. ಈ ಹಿಂದೆ 2014ರ ಲೋಕಸಭೆ ಚುನಾವಣೆಯಲ್ಲಿ ಶಿಕಾರಿಪುರ, ಚಿಕ್ಕೋಡಿ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ತದನಂತರ ಕಳೆದ ಆರು ತಿಂಗಳ ಹಿಂದೆ ಹೆಬ್ಬಾಳ, ಬೀದರ್ ಉತ್ತರ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಎರಡು ಬಾರಿ ನಡೆದ ಉಪಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ಇನ್ನೊಂದು ಬಾರಿ ಬಿಜೆಪಿ ನಗುವಿನ ಕೇಕೆ ಹಾಕಿತ್ತು. ಈಗ ಶ್ರೀನಿವಾಸ್‍ಪ್ರಸಾದ್ ರಾಜೀನಾಮೆಯಿಂದ ಮೈಸೂರು ಜಿಲ್ಲೆ ಮತ್ತೊಮ್ಮೆ ರಾಷ್ಟ್ರದ ಗಮನ ಸೆಳೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಇದಾಗಿರುವುದರಿಂದ ಗೆಲ್ಲುವ ಅನಿವಾರ್ಯತೆ ಅವರಿಗಿದ್ದರೆ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಸಾದ್ ಗೆಲ್ಲಲೇಬೇಕಾಗಿದೆ.

ಪ್ರಸಾದ್‍ಗೆ ಗಾಳ:

ಶ್ರೀನಿವಾಸ್‍ಪ್ರಸಾದ್ ರಾಜೀನಾಮೆ ನೀಡಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ತನ್ನತ್ತ ಸೆಳೆದುಕೊಳ್ಳಲು ಕಸರತ್ತು ಆರಂಭಿಸಿದೆ. ಇದರ ನಡುವೆ ಬಿಎಸ್‍ಪಿ ಕೂಡ ತನ್ನ ತೆಕ್ಕೆಗೆ ಸೆಳೆಯಲು ಪ್ರಾರಂಭಿಸಿದೆ. ಆದರೆ ಈವರೆಗೂ ತಮ್ಮ ಮುಂದಿನ ನಡೆ ಬಗ್ಗೆ ಶ್ರೀನಿವಾಸ್‍ಪ್ರಸಾದ್ ಗುಟ್ಟು ಬಿಟ್ಟುಕೊಟ್ಟಿಲ್ಲ.

► Follow us on –  Facebook / Twitter  / Google+

Sri Raghav

Admin