‘ಕೈ’ ಖಜಾನೆ ಲಾಕ್ ಮಾಡಲು ಬಿಜೆಪಿಯಿಂದ ಐಟಿ ಕೀ ಬಳಕೆ..?

Spread the love

Congres--01

ಬೆಂಗಳೂರು, ಫೆ.11-ಕಾಂಗ್ರೆಸ್‍ನ ಹಲವು ಪ್ರಭಾವಿ ನಾಯಕರು, ಶ್ರೀಮಂತ ಸಚಿವರು, ಭಾರೀ ಕುಳಗಳ ವಿರುದ್ಧ ಐಟಿ ಬ್ರಹ್ಮಾಸ್ತ್ರ ಪ್ರಯೋಗಿಸಿ ಚುನಾವಣೆಗೆ ಫಂಡ್ ಮಾಡದಂತೆ ಬ್ರೇಕ್ ಹಾಕುವ ಪ್ಲಾನ್‍ವೊಂದನ್ನು ರೂಪಿಸಲಾಗಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಖಜಾನೆಯನ್ನು ಖಾಲಿ ಮಾಡಲು ಮೋದಿಯವರು ಈ ತಂತ್ರ ರೂಪಿಸಿದ್ದು, ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಇರುವವರ ಮೇಲೆ ಐಟಿ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‍ನ ಭಾರೀ ಕುಳಗಳ ಮೇಲೆ ಕಣ್ಣಿಟ್ಟಿರುವ ಮೋದಿ ಅವರು, ಚುನಾವಣಾ ಸಂದರ್ಭದಲ್ಲಿ ಐಟಿ-ಇಡಿ ಮೂಲಕ ಅವರಿಗೆ ಕಡಿವಾಣ ಹಾಕಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ.  ಹೀಗಾಗಿ ಕೈನ ಹಲವು ನಾಯಕರಿಗೆ ಐಟಿ ಭಯ ಶುರುವಾಗಿದೆ. ಈಗಾಗಲೇ ಪ್ರಭಾವಿ ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಅವರ ಮೇಲೆ ಐಟಿ ದಾಳಿ ನಡೆದಿದ್ದು , ಇಡಿ ಅಸ್ತ್ರ ಪ್ರಯೋಗ ಮಾಡಬಹುದಾಗಿದೆ.  ಅಲ್ಲದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆ ನಡೆಯುತ್ತಿದ್ದು , ಆ ಪ್ರಕರಣದಲ್ಲೂ ಮುಖ್ಯಮಂತ್ರಿಗಳ ಆಪ್ತರಾದ ಜಾರ್ಜ್ ಅವರ ವಿಚಾರಣೆ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ಈ ಎಲ್ಲವನ್ನು ಕೆದುಕುತ್ತಾ ಕುಳಿತರೆ ಪ್ರಭಾವಿಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸಬಹುದಾಗಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.

ಇದಲ್ಲದೆ ಮುಖ್ಯಮಂತ್ರಿಗಳ ವಲಯದಲ್ಲಿರುವ ಉದ್ದಿಮೆಗಳು ಭಾರೀ ಕುಳಗಳ ಮೇಲೆ ಐಟಿ-ಇಡಿ ಇಲಾಖೆ ಕಣ್ಣಿಟ್ಟಿದೆ. ಯಾವುದೇ ಸಂದರ್ಭದಲ್ಲಾದರೂ ದಾಳಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ದಾಳಿ ನಡೆದರೆ ಅವರು ಚುನಾವಣೆಗೆ ಫಂಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಕಾಂಗ್ರೆಸ್ ವೇಗಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಲಾಗಿದೆ.  ಚುನಾವಣೆ ಸಂದರ್ಭದಲ್ಲಿ ಈ ಕ್ರಮಗಳು ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಊಹಿಸಲು ಸಾಧ್ಯವಾಗುವುದಿಲ್ಲ. ಇಷ್ಟು ದಿನ ಸುಮ್ಮನಿದ್ದು , ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಭಾವಿ ನಾಯಕ ಮೇಲೆ ದಾಳಿಗೆ ಮುಂದಾದರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ತಂತ್ರ-ಪ್ರತಿತಂತ್ರಗಳ ಲೆಕ್ಕಾಚಾರ ರಾಜಕೀಯ ಪಕ್ಷಗಳಲ್ಲಿ ನಡೆಯುತ್ತಿದೆ. ಆಟ-ಮೇಲಾಟಗಳಲ್ಲಿ ಯಾರಿಗೆ ಸೋಲು-ಗೆಲುವು ಎಂಬುದನ್ನು ಕಾದು ನೋಡಬೇಕು.
ಯಾರು ಯಾವ ದಾಳ ಉರುಳಿಸುತ್ತಾರೆ. ದಾಳಕ್ಕೆ ಯಾರು ಬಲಿಯಾಗುತ್ತಾರೆ. ಯಾರ ಕೈ ಮೇಲಾಗುತ್ತದೆ, ಜನ ಯಾರಿಗೆ ಒಲಿಯುತ್ತಾರೆ ಎಂಬುದು ಚುನಾವಣೆಯೇ ನಿರ್ಧರಿಸಲಿದೆ.

Facebook Comments

Sri Raghav

Admin