ಕೊನೆಗೂ ವಿವಾದಿತ ನ್ಯಾಯಮೂರ್ತಿ ಕರ್ಣನ್ ಬಂಧನ
ಕೊಯಮತ್ತೂರು. ಜೂ.20 : ನ್ಯಾಯಾಂಗ ನಿಂದನೆ ಆರೋಪದಡಿ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿ ತಲೆ ಮರೆಸಿಕೊಂಡಿದ್ದ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿಎಸ್ ಕರ್ಣನ್ ಅವರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೇ 9ರಂದು ಕರ್ಣನ್ ನಾಪತ್ತೆಯಾಗಿದ್ದು ಅವರನ್ನು ಬಂಧಿಸಲು ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಮುಂದಾಗಿದ್ದರು. ಅಂತಿಮವಾಗಿ ಕೊಯಮತ್ತೂರಿನಲ್ಲಿ ಸಿಐಡಿ ಅಧಿಕಾರಿಗಳು ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶಿಸಿದ್ದ ಆರು ತಿಂಗಳ ಜೈಲು ಸಜೆ ತೀರ್ಪಿನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ, ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್.ಕರ್ಣನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ನಿಂದನೆ ಆರೋಪಕ್ಕೆ ಗುರಿಯಾಗಿರುವ ಕಲ್ಕತ್ತ ಹೈಕೋರ್ಟ್ನ ವಿವಾದಿತ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರನ್ನು ತಕ್ಷಣ ಆರು ತಿಂಗಳ ಕಾಲ ಜೈಲಿಗೆ ಕಳುಹಿಸುವಂತೆ ಸುಪ್ರೀಂಕೋರ್ಟ್ ಅಭೂತಪೂರ್ವ ಆದೇಶ ಹೊರಡಿಸಿತ್ತು. ನ್ಯಾಯಾಂಗ ನಿಂದನೆಗಾಗಿ ಹೈಕೋರ್ಟ್ ನ್ಯಾಯಾಧೀಶರೊಬ್ಬರಿಗೆ ಸರ್ವೋಚ್ಚ ನ್ಯಾಯಾಲಯ ಜೈಲು ಶಿಕ್ಷೆ ವಹಿಸಿರುವುದು ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ನ್ಯಾಯಾಂಗ ಬಂಧನಕ್ಕೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.
< Eesanje News 24/7 ನ್ಯೂಸ್ ಆ್ಯಪ್ >