ಕೊನೆ ಪಂದ್ಯದಲ್ಲೂ ಸೋತ ಇಂಗ್ಲೆಂಡ್ : 4-0 ಅಂತರದಲ್ಲಿ ಪೇಟಿಎಂ ಟೆಸ್ಟ್ ಸರಣಿ ಗೆದ್ದ ಭಾರತ

Spread the love

Test-Won

ಚೆನೈ. ಡಿ.20– ಅಂತಿಮ ದಿನದಾಟದ ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ತಂಡವನ್ನು ಆಲ್‍ಔಟ್ ಮಾಡುವ ಮೂಲಕ ಪೇಟಿಎಂ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಭಾರತ 4-0 ಅಂತರದಿಂದ ಇಂಗ್ಲೆಂಡ್ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನದಾಟ ಇನ್ನೇನು 30 ನಿಮಿಷ ಬಾಕಿ ಉಳಿದಿರುವಂತೆಯೇ ಭಾರತ ಗೆಲುವಿನ ನಗೆ ಬೀರಿದ್ದು, ಪ್ರವಾಸಿ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಹಾಗೂ 75 ರನ್‍ಗಳ ಅಂತರದಿಂದ ಸೋಲು ಕಂಡಿದೆ.

ಇಂದಿನ ದಿನದಾಟದಲ್ಲಿ ರವೀಂದ್ರ ಜಡೆಜಾ 7 ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡ್‍ಗೆ ಸಿಂಹ ಸ್ವಪ್ನವಾಗಿ ಕಾಡಿದರು. ಹೇಗಾದರೂ ಮಾಡಿ ಡ್ರಾ ಮಾಡಿಕೊಳ್ಳುವ ತವಕದಲ್ಲಿದ್ದ ಕುಕ್ ಪಡೆಗೆ ತೀವ್ರ ಮುಖಬಂಗವಾಗಿದ್ದು ಸರಣಿಯ ಪ್ರಥಮ ಪಂದ್ಯ ಬಿಟ್ಟರೆ ಮಿಕ್ಕೆಲ್ಲಾ ಪಂದ್ಯಗಳಲ್ಲಿ ಬ್ಯಾಟಿಂಗ್, ಬೋಲಿಂಗ್ ಕಳಪೆಯಾಗಿ ಸರಣಿ ಸೋಲಿಗೆ ಕಾರಣವಾಯಿತು ಎಂದು ಇಂಗ್ಲೆಂಡ್‍ನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 4ನೇ ದಿನದಾಟದ ಅಂತ್ಯಕ್ಕೆ (12 ರನ್)ಎಲ್ಲಾ ವಿಕೆಟ್‍ಗಳನ್ನು ಉಳಿಸಿಕೊಂಡು ಕೊನೆಯ ದಿನದಾಟ ಮುಂದುವರಿಸಿದ ಕುಕ್ ಮತ್ತು ಕೀಟನ್ ಜೆನ್ನಿಂಗ್ಸ್ ಜೊಡಿ ಉತ್ತಮ ಆರಂಭ ನೀಡಿತು. ಭೋಜನ ವಿರಾಮದ ವೇಳೆಗೆ ಇಬ್ಬರು ಆಟಗಾರರು ಭಾರತದ ಬೋಲರ್‍ಗಳಿಗೆ ಉತ್ತಮ ಪ್ರತಿರೋಧ ತೋರಿದರು.

ಒಂದು ಹಂತದಲ್ಲಿ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುತ್ತದೆ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಮ್ಯಾಜಿಕ್ ಬೋಲಿಂಗ್ ದಾಳಿಗಿಳಿದ ರವೀಂದ್ರಜಡೇಜಾ, ಆಂಗ್ಲ ನಾಯಕ ಕುಕ್ ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಲೆಗ್‍ಸ್ಲಿಪ್‍ನಲ್ಲಿ ನಿಂತಿದ್ದ ಕೆ.ಎಲ್.ರಾಹುಲ್ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರು. ನಂತರ ಮತ್ತೊಬ್ಬ ಆರಂಭಿಕ ಆಟಗಾರ ಕೀಟನ್ ಜೆನ್ನಿಂಗ್ಸ್ ಕೂಡ ಮುನ್ನುಗ್ಗಿ ಚೆಂಡನ್ನು ಬೌಂಡ್ರಿಗೆ ಅಟ್ಟುವ ಭರದಲ್ಲಿ ಬೋಲಿಂಗ್ ಮಾಡುತ್ತಿದ್ದ ಜಡೇಜಾ ಅವರಿಗೆ ಕ್ಯಾಚ್ ನೀಡಿ ಔಟಾದರು. ನಂತರ ಜೋರೂಟ್(6), ಅಲಿ(44) ಅವರ ವಿಕೆಟ್ ಉರುಳಿಸುವಲ್ಲಿಯೂ ಕೂಡ ಜಡೇಜಾ ಯಶಸ್ವಿಯಾದರು. ನೋಡ ನೊಡುತ್ತಿದ್ದಂತೆಯೇ ಒಂದೊಂದೇ ವಿಕೆಟ್ ಉರುಳಿ ಇಂಗ್ಲೆಂಡ್ ಪಾಳೆಯದಲ್ಲಿ ಆತಂಕ ಮನೆ ಮಾಡಿತು.

ವೇಗಿ ಇಶಾಂತ್ ಶರ್ಮ, ಬ್ರಿಸ್‍ಸ್ಟೌ (1) ವಿಕೆಟ್ ಉರುಳಿಸಿದಾಗ ಇಂಗ್ಲೆಂಡ್ ಮುಳುಗುವ ಹಡಗಾಗಿ ಪರಿಣಮಿಸಿತು. ನಂತರ ಬಂದ ಬಂಟ್ಲರ್ 50 ಚೆಂಡ್‍ಗಳನ್ನಾಡಿ ಕೇವಲ 3 ರನ್ ಗಳಿಸಿ ತಂಡವನ್ನು ಹೇಗಾದರೂ ಮಾಡಿ ಸೋಲಿನಿಂದ ತಪ್ಪಿಸಲು ಪ್ರಯಾಸಪಟ್ಟರು. ಆದರೆ ಇದಕ್ಕೆ ಕೊಯ್ಲಿ ಆಸ್ಪದ ಕೊಡದೆ ಬ್ಯಾಟ್ಸ್‍ಮನ್ ಅಕ್ಕಪಕ್ಕ ಫೀಲ್ಡ್‍ರ್‍ಗಳನ್ನು ನಿಲ್ಲಿಸಿ ಇಂಗ್ಲೆಂಡರ ಮೇಲೆ ಒತ್ತಡ ಹೆಚ್ಚಿಸಿದರು. ಅದರಂತೆಯೇ ಅವರ ತಂತ್ರ ಯಶಸ್ವಿಯಾಗಿ ಇಂಗ್ಲೆಂಡ್‍ನ ಬಾಲಂಗೋಚಿಗಳಾದ ಡ್ಯಾವ್‍ಸನ್(0), ರಶೀದ್ (2) ಮತು ಬಾಲ್ (0) ಜಡೇಜಾ ಅವರ ಸ್ಪನ್ ದಾಳಿಗೆ ತತ್ತರಿಸಿ ವಿಕೆಟ್ ಒಪ್ಪಿಸಿ, ಒಬ್ಬರ ನಂತರ ಒಬ್ಬರು ಫೆವಿಲಿಯನ್‍ಗೆ ಮರಳಿದರು. ಕೊನೆಯಲ್ಲಿ ಬ್ರಾಡ್ ಔಟಾಗುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ ಸಮಾಪ್ತಿಯಾಯಿತು.

ಅಂತಿಮ ಸ್ಕೋರ್: ಭಾರತ ಪ್ರಥಮ ಇನ್ನಿಂಗ್ಸ್-759,
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್-477, ದ್ವಿತೀಯ ಇನ್ನಿಂಗ್ಸ್-207.
ಪಂದ್ಯ ಪುರುಷ- ಕರುಣ್ ನಾಯರ್.
ಸರಣಿ ಶ್ರೇಷ್ಠ- ವಿರಾಟ್ ಕೊಯ್ಲಿ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin