ಕೊಲೆ ಆರೋಪಿಗಳಿಗೆ ಮುಖ್ಯಮಂತ್ರಿಗಳಿಂದ ರಕ್ಷಣೆ : ಶೋಭಾ ಕರಂದ್ಲಾಜೆ ಆರೋಪ
ಕಲಬುರಗಿ, ಅ.21-ರಾಜ್ಯದಲ್ಲಿ ತಿಂಗಳಿಗೊಂದು ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ಇದನ್ನು ನೋಡಿದರೆ ಪ್ರೊ ಫೆಶನಲ್ ಕಿಲ್ಲರ್ಗಳು ನಮ್ಮ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಸಂಸದೆ ಶೋಭಾಕರಂದ್ಲಾಜೆ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಜನರಲ್ಲಿ ಭೀತಿ ಮೂಡಿಸಿದೆ. ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಮುಖ್ಯಮಂತ್ರಿಗಳು ಆರೋಪಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇಂಥವರನ್ನೇ ಬಂಧಿಸುವಂತೆ ಪೊಲೀಸರಿಗೆ ಸರ್ಕಾರದಿಂದಲೇ ದೂರವಾಣಿ ಕರೆ ಹೋಗುತ್ತಿವೆ ಎಂದು ದೂರಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಮಂತ್ರಿಗಳ ಮಾತಿಗೆ ಮುಖ್ಯಮಂತ್ರಿಗಳು ಬೆಲೆ ಕೊಡುತ್ತಿಲ್ಲ. ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಸೇರಿದಂತೆ ಕೆಲ ಅಧಿಕಾರಿಗಳನ್ನು ಕೀಳು ಮಟ್ಟದಿಂದ ಕಾಣುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಅಸುರಕ್ಷಿತ ರಾಜ್ಯವಾಗಿದೆ ಎಂದು ಹೇಳಿದರು.
ರುದ್ರೇಶ್ ಕೊಲೆ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕೆಂದು ಶೋಭಾಕರಂದ್ಲಾಜೆ ಇದೇ ವೇಳೆ ಆಗ್ರಹಿಸಿದರು.ಜನವರಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಮುಂದಿನ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕಲಬುರಗಿಯಲ್ಲಿ ಜ.21, 22 ರಂದು ನಡೆಯಲಿದ್ದು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.ಖರ್ಗೆ ವಿರುದ್ಧ ವಾಗ್ದಾಳಿ: ರೈಲ್ವೆ ಯೋಜನೆ ಬಗ್ಗೆ ಈ ಭಾಗದ ದೊಡ್ಡ ಜನ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ ರಾಜ್ಯ ಸರ್ಕಾರ ಯೋಜನೆಗೆ ತಮ್ಮ ಪಾಲಿನ ಹಣವನ್ನೇ ನೀಡುತ್ತಿಲ್ಲ. ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಪರೋಕ್ಷವಾಗಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಶೋಭಾಕರಂದ್ಲಾಜೆ ವಾಗ್ದಾಳಿ ನಡೆಸಿದರು.ಬೀದರ್-ಕಲಬುರಗಿಯಲ್ಲಿ ರೈಲ್ವೆ ಮಾರ್ಗ ಆಮೆಗತಿಯಲ್ಲಿ ಸಾಗಿದೆ. ಇದಕ್ಕೆ ರಾಜ್ಯಸರ್ಕಾರವೇ ನೇರ ಹೊಣೆ ಎಂದು ದೂರಿದರು.
► Follow us on – Facebook / Twitter / Google+