ಕೊಳಗೇರಿ ನಿವಾಸಿಗಳ ಹಕ್ಕು ಪತ್ರ ಸಮಸ್ಯೆ ಶೀಘ್ರ ಪರಿಹಾರ

muniraju

ಬೆಂಗಳೂರು, ಅ.7- ಕೊಳಗೇರಿ ನಿವಾಸಿಗಳ ಬಹು ದಿನಗಳ ಬೇಡಿಕೆಯಾದ ಶಾಶ್ವತ ಹಕ್ಕು ಪತ್ರ ಕೊಡಿಸುವ ಸಂಬಂಧ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಮುನಿರಾಜು ಭರವಸೆ ನೀಡಿದರು. ಬೆಂಗಳೂರು ನಗರ ಬಿಜೆಪಿ ಸ್ಲಂ ಮೋರ್ಚಾ ಕಾರ್ಯ ಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಳಗೇರಿಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ, ಒಳಚರಂಡಿ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಬೇಕು ಇದಕ್ಕೆಲ್ಲಕ್ಕಿಂತ ಮುಖ್ಯವಾಗಿ ಶಾಶ್ವತ ಹಕ್ಕು ಪತ್ರ ಸಿಗಬೇಕಿದೆ ಈ ಬಗ್ಗೆ ಶೀಘ್ರವೇ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡರೊಂದಿಗೆ ಮಾತುಕತ  ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.
ನಗರದಲ್ಲಿ ಸುಮಾರು 20 ಲಕ್ಷ ಸ್ಲಂ ನಿವಾಸಿ ಗಳಿದ್ದಾರೆ ಚುನಾವಣೆ ವೇಳೆ ಇತರೆ ಪಕ್ಷದವರು ಸುಳ್ಳು ಭರವಸೆ ನೀಡಿ ಮತ ಪಡೆದು ಮರೆತು ಬಿಡುತ್ತಾರೆ. ಸ್ಲಂ ನಿವಾಸಿಗಳೇ ನಿಜವಾದ ಮತದಾರರು, ಚುನಾವಣೆ ವೇಳೆ ಮತಗಟ್ಟೆಗೆ ಬಂದು ಇವರು ಮತ ಹಾಕುತ್ತಾರೆ ಎಂದು ತಿಳಿಸಿದರು.
ಪ್ರತಿ ಚುನಾವಣೆ ಸಮಯದಲ್ಲೂ ಕುಡಿಯಲು ಶುದ್ಧ ನೀರಿಲ್ಲ , ರಸ್ತೆಗಳಿಲ್ಲ , ಚರಂಡಿಗಳಿಲ್ಲದೆ ಹೀನಾಯ ಬದುಕು ನಡೆಸುತ್ತಿದ್ದೇವೆ ಎಂದು ಸಮಸ್ಯೆ ಹೇಳಿಕೊಂಡರು ಕೂಡ ಇದುವರೆಗೆ ಯಾರೂ ಸಮಸ್ಯೆ ಬಗೆಹರಿಸಿಲ್ಲ ಎಂದರು. ಹಿಂದೆ ಸ್ಲಂ ನಿವಾಸಿಗಳು ಕಾಂಗ್ರೆಸ್‍ನ ವೋಟ್ ಬ್ಯಾಂಕ್‍ಗಳಿದ್ದರು. ಇಂದಿರಾಗಾಂಧಿ ನಾಯಕತ್ವವನ್ನು ಮೆಚ್ಚಿ ಈ ನಿವಾಸಿಗಳು ಕಾಂಗ್ರೆಸ್‍ಗೆ ಮತ ಹಾಕುತ್ತಿದ್ದರು. ಈಗ ಕಾಲ ಬದಲಾಗಿದೆ. ಸ್ಲಂ ನಿವಾಸಿಗಳು ಬಿಜೆಪಿ ಕಡೆ ಒಲವು ತೋರುತ್ತಿದ್ದಾರೆ.
ಇತ್ತೀಚಿನ ಎಲ್ಲ ಚುನಾವಣೆಗಳಲ್ಲಿ ಸ್ಲಂ ನಿವಾಸಿಗಳು ಬಿಜೆಪಿಗೆ ಮತ ಹಾಕಿದ್ದಾರೆ. ಸ್ಲಂಗಳಿರುವ ಕಡೆ ಹೆಚ್ಚು ಬಿಜೆಪಿ ಕಾರ್ಪೊರೇಟರ್ ಗಳು ಗೆದ್ದಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಈ ನಿವಾಸಿಗಳಿಗೆ ತಲುಪಿಸಿ ಅವರ ಪರಿಸ್ಥಿತಿಯನ್ನು ಸುಧಾರಿಸುವುದು ಅತ್ಯಗತ್ಯವಾಗಿದೆ ಎಂದರು. ಸ್ಲಂ ಬೋರ್ಡ್ ಕೂಡ ಡಿನೋಟಿಫಿಕೇಷನ್ ಆಗುವ ಹಂತ ತಲುಪಿದೆ ಎಂದು ಟೀಕಿಸಿದ ಮುನಿರಾಜು, ಎಲ್ಲೆಲ್ಲಿ ಖಾಸಗಿ ಹಾಗೂ ಖಾಲಿ ನಿವೇಶನಗಳಿವೆಯೋ ಅಲ್ಲಿ ಸ್ಲಂ ನಿವಾಸಿಗಳಿಗೆ ಕೂಡಲೇ ನಿವೇಶನ ಕೊಡಬೇಕೆಂದು ಆಗ್ರಹಿಸಿದರು.ಸ್ಲಂ ನಿವಾಸಿಗಳು ಹಣ ಕೊಟ್ಟರೆ ಯಾರಿಗೆ ಬೇಕಾದರೂ ಮತ ಹಾಕುತ್ತಾರೆ ಎಂಬ ಮಾತಿತ್ತು. ಈಗ ಅವರು ಬದಲಾಗಿದ್ದಾರೆ. ಅವರಿಗೂ ಯಾರಿಗೆ ಮತ ಹಾಕಬೇಕೆಂಬುದು ಗೊತ್ತಿದೆ. ಈ ಹಿನ್ನೆಲೆಯಲ್ಲಿ ಕೊಳಗೇರಿ ನಿವಾಸಿಗಳ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಸ್ಲಂ ಮೋರ್ಚಾದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Sri Raghav

Admin