ಕೋಮುಗಲಭೆಗೆ ಸಂಬಂದಿಸಿದ ಅಲ್ಪಸಂಖ್ಯಾತರ ಮೇಲಿರುವ ಕೇಸ್ ವಾಪಸ್..!

FIR--01

ಬೆಂಗಳೂರು, ಜ.26- ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಕೋಮುಗಲಭೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜ.25ರಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಸಾಮಾನ್ಯ ವಿಭಾಗದ ಮುಖ್ಯಸ್ಥರು ವಿವಿಧ ಜಿಲ್ಲೆಗಳ ಎಸ್‍ಪಿಗಳು ಹಾಗೂ ನಗರ ಪೊಲೀಸ್ ಆಯುಕ್ತರುಗಳಿಗೆ ಸೂಚನಾ ಪತ್ರ ಕಳುಹಿಸಿದ್ದು, ಕೋಮುಗಲಭೆ ಮತ್ತು ಇತರೆ ಗಲಾಟೆ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಿದ್ದಾರೆ.

ಕಳೆದ ಡಿ.22ರಂದು ಸಂಖ್ಯೆ ಒಇ 194, ಮೊಹಿಬಾ 2017ರ ಮೂಲಕ ಮೊದಲ ಬಾರಿಗೆ ಪೊಲೀಸ್ ಜಿಲ್ಲಾ ಮುಖ್ಯಸ್ಥರಿಗೆ ಜನವರಿ 2ರಂದು ಪತ್ರ ಬರೆಯಲಾಗಿದ್ದು, ಜ.19ರಂದು ಮೂರನೇ ಸುತ್ತಿನ ಪತ್ರ ಬರೆದು ನೆನಪಿನೋಲೆಯನ್ನು (ರಿಮ್ಯಾಂಡರ್)ರವಾನಿಸಲಾಗಿದೆ. ಮಂಗಳೂರು, ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯಗಳು, ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಕೆಜಿಎಫ್, ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕಾರವಾರ, ಚಿಕ್ಕಮಗಳೂರು, ಉಡುಪಿ, ಬಳ್ಳಾರಿ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಎಸ್‍ಪಿಗಳಿಗೆ ಪತ್ರ ಬರೆಯಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಅಂದರೆ 2013,14,15,16 ಮತ್ತು 2017ನೇ ಸಾಲಿನಲ್ಲಿ ನಡೆದಿರುವ ಕೋಮುಗಲಭೆಗಳಿಗೆ ಸಂಬಂಧಪಟ್ಟಂತೆ ಅಲ್ಪಸಂಖ್ಯಾತ ಸಮುದಾಯದ ಮುಗ್ಧರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡುವಂತೆ ಕೋರಲಾಗಿತ್ತು. ಆದರೆ, ತಮ್ಮಿಂದ ಈವರೆಗೂ ವರದಿ ಬಂದಿಲ್ಲ. ಆದ್ದರಿಂದ ಕೋಮುಗಲಭೆ ಹಾಗೂ ಇತರೆ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ದ್ವಿಪ್ರತಿಯಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅತ್ಯಂತ ಆತುರದಲ್ಲಿದ್ದು, ಒಂದರ ಮೇಲೆ ಒಂದು ಪತ್ರ ಬರೆದು ಪೊಲೀಸ್ ಮುಖ್ಯಾಧಿಕಾರಿಗಳಿಂದ ವರದಿ ಪಡೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಮಂಗಳೂರಿನಲ್ಲಿ ಕಳೆದ 6ತಿಂಗಳಿನಿಂದೀಚೆಗೆ ಕೋಮುದಳ್ಳುರಿ ಹೆಚ್ಚಾಗಿ ಜನ ಜೀವನ ನಲುಗಿ ಹೋಗಿತ್ತು. ಈ ಗಲಭೆಗಳಿಗೆ ರಾಜ್ಯ ಸರ್ಕಾರದ ದೋರಣೆಗಳೇ ಕಾರಣ. ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ಸರ್ಕಾರ ಅವರ ಮೇಲೆ ಈ ಮೊದಲು ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ. ಇದರಿಂದ ಪಿಎಫ್‍ಐ, ಎಸ್‍ಡಿಪಿಐ ನಂತಹ ಸಂಘಟನೆಗಳು ರಾಜ್ಯಾದ್ಯಂತ ಕೋಮುಗಲಭೆಗಳನ್ನು ಸೃಷ್ಟಿಸುತ್ತಿವೆ. 32ಕ್ಕೂ ಹೆಚ್ಚು ಹಿಂದೂರ ಕಾರ್ಯಕರ್ತರ ಹತ್ಯೆಯಾಗಿದೆ ಎಂಬ ಆರೋಪಗಳನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಮಾಡಿದ್ದವು. ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಗಲಭೆಗಳು ತಣ್ಣಗಾಗಿ ಶಾಂತಿ ನೆಲೆಸುವ ವೇಳೆ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಮುಂದಾಗಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ಆರೋಪವನ್ನು ಲೆಕ್ಕಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೇವಲ ಅಲ್ಪಸಂಖ್ಯಾತರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಮಾತ್ರ ಹಿಂಪಡೆಯಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು ಹಲವಾರು ರೀತಿಯ ಜನಪರ ಹೋರಾಟಗಳನ್ನು ನಡೆಸಿದ ವೇಳೆ ಪೊಲೀಸರು ವಿವಿಧ ಸೆಕ್ಷನ್‍ಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದ್ದು, ಉಳಿದಂತೆ ರೈತರು, ದಲಿತರು ಮತ್ತು ಕನ್ನಡ ಪರ ಸಂಘಟನೆಗಳ ಮೇಲಿನ ಪ್ರಕರಣಗಳು ಯಥಾರೀತಿ ಮುಂದುವರೆದಿವೆ.  ಈಗ ಏಕಾಏಕಿ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ತುರ್ತಾಗಿ ಹಿಂಪಡೆಯಲು ಸರ್ಕಾರ ಪ್ರಯತ್ನಿಸುತ್ತಿರುವುದು ಮತ್ತೊಂದು ರಾಜಕೀಯ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.
ಅಲ್ಪಸಂಖ್ಯಾತರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.
ಗೃಹ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಪೊಲೀಸರ ಸ್ಪಷ್ಟ ಅಭಿಪ್ರಾಯವನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಕೇವಲ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳೇ ಅಲ್ಲ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಹೋರಾಟಗಾರರ ಮೇಲಿನ ಪ್ರಕರಣಗಳನ್ನೂ ಹಿಂಪಡೆಯಲು ಸರ್ಕಾರ ಮುಂದಾಗಿದೆ. ಪೊಲೀಸ್ ಅಧಿಕಾರಿಗಳ ಅಭಿಪ್ರಾಯ ಆಧರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Sri Raghav

Admin