ಕೋಲಾರ ಜಿಲ್ಲೆ ಬರ ಕುರಿತು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟ ಜಿಲ್ಲಾಧಿಕಾರಿ

kolara

ಕೋಲಾರ, ನ.5- ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಸತತ ಬರ ಪರಿಸ್ಥಿತಿ ಎದುರಾಗಿದ್ದು, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಬರ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಡಳಿತ ಕಮಲ್ ಚೌಹಾನ್ ನೇತೃತ್ವದ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿತು.  ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‍ಚಂದ್ರ ಅವರು ಜಿಲ್ಲೆಗೆ ಎನ್.ಡಿ.ಆರ್.ಎಫ್ ಮಾನದಂದಡಗಳ ಪ್ರಕಾರ ಗ್ರಾಮೀಣ ಮತ್ತು ನಗರ ಕುಡಿಯುವ ನೀರು ಸರಬರಾಜಿಗೆ 15.07 ಕೋಟಿ ರೂ, ಬೆಳೆ ನಷ್ಟ ಪರಿಹಾರಕ್ಕೆ 46.77 ಕೋಟಿ ರೂ, ಹಿಪ್ಪು ನೇರಳೆ ಬೆಳೆ ನಷ್ಟ ಪರಿಹಾರಕ್ಕೆ 22 ಲಕ್ಷ ರೂ ಹಾಗೂ ಗೋಶಾಲೆ, ಮೇವು ಬ್ಯಾಂಕ್ ಮತ್ತು ಲಸಿಕೆಗಳಿಗೆ 4.02 ಕೋಟಿ ಸೇರಿದಂತೆ ಒಟ್ಟು 66.10 ಕೋಟಿ ರೂ ನೆರವಿನ ಅಗತ್ಯವಿದೆ ಎಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.

ಜಿಲ್ಲೆಯಲ್ಲಿ 69,793 ಹೆಕ್ಟೇರ್ ಪ್ರದೇಶದಲ್ಲಿ ಶೇ.33 ಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 12635.28 ಹೆಕ್ಟೇರ್ ಪ್ರದೇಶದಲ್ಲಿ 126 ಕೋಟಿ ರೂಗಳಿಗೆ ಹೆಚ್ಚು ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಸದ್ಯ 2017 ರ ಜನವರಿ ಮಧ್ಯದವರೆಗೂ ಸಾಕಾಗುವಷ್ಟು ಮೇವು ಲಭ್ಯವಿದೆ. ಮೇವು ಕೊರತೆ ಉದ್ಭವಿಸುವ ಸಾಧ್ಯತೆ ಇರುವುದರಿಂದ 39356 ಮೇವು ಮಿನಿ ಕಿಟ್‍ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದ್ದು 3935 ಹೆಕ್ಟೇರ್ ಪ್ರದೇಶದಲ್ಲಿ ಮೇವು ಲಭ್ಯವಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿಗಳು ಕೇಂದ್ರ ತಂಡಕ್ಕೆ ವಿವರಿಸಿದರು.

ಹಿಪ್ಪನೇರಳೆ ಬೆಳೆ ನಷ್ಟವಾಗಿರುವುದರಿಂದ ಜಿಲ್ಲೆಯಲ್ಲಿ ಇನ್‍ಪುಟ್ ಸಬ್ಸಿಡಿಗಾಗಿ 22.2 ಲಕ್ಷ ರೂ. ಅಗತ್ಯವಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಯಾವುದೇ ಮೇಲ್ಮೈ ಜಲ ಮೂಲ ಇಲ್ಲದಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಕೇವಲ 3 ತಿಂಗಳು ಟ್ಯಾಂಕರ್ ಮೂಲಕ ನೀರು ಪೂರೈಸುವ ಕುರಿತ ನಿಯಮಗಳನ್ನು ಸಡಿಲಗೊಳಿಸಿ ಹೆಚ್ಚುವರಿ ಅನುದಾನ ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿ ಡಾ.ತ್ರಿಲೋಕ್‍ಚಂದ್ರ ಹಾಗೂ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು ಮನವಿ ಮಾಡಿದರು.
ಜೊತೆಗೆ ನೀರಿನ ಸಂರಕ್ಷಣೆಗೆ ಜಿಲ್ಲೆಯಲ್ಲಿ ಆದ್ಯತೆ ನೀಡುವ ಅಗತ್ಯವಿದ್ದು, ಇದಕ್ಕಾಗಿಯೂ ವಿಶೇಷ ಅನುದಾನ ಒದಗಿಸುವಂತೆ ಅವರು ಕೋರಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಶ್ರೀ ಸಿ.ಎನ್. ಮಂಜುನಾಥ್ ಮತ್ತು ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಸಭೆಯ ನಂತರ ಬರ ಅಧ್ಯಯನ ತಂಡವು ಕೋಲಾರ ತಾಲ್ಲೂಕಿನ ತಲಗುಂದ ಗ್ರಾಮಲ್ಲಿ ರಾಗಿ ಬೆಳೆ ಮತ್ತು ಮೇವಿನ ಬೆಳೆ ನಾಶವಾಗಿರುವುದನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ತಂಡದ ಸದಸ್ಯರು ರೈತರು, ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಬರ ಪರಿಸ್ಥಿತಿಯ ತೀವ್ರತೆಯ ಕುರಿತು ಮಾಹಿತಿ ಪಡೆದರು.ಕೇಂದ್ರ ಬರ ಅಧ್ಯಯನ ತಂಡದಲ್ಲಿ ಭಾರತೀಯ ಆಹಾರ ನಿಗಮದ ಡಿಜಿಎಂ ಎಲ್.ಚಾತ್ರು ನಾಯ್ಕ್, ನಿತಿ ಆಯೋಗದ ಸಂಶೋಧನಾ ಅಧಿಕಾರಿ ಗಣೇಶ್ ರಾಮ್ ಇದ್ದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸತತ ಐದು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ಕೋಲಾರ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿಂದಾಗಿ ಬೆಳೆ ಹಾನಿ, ನಗರ ಹಾಗೂ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ, ರಾಗಿ ಮತ್ತು ಮೇವಿನ ಬೆಳೆ ನಾಶವಾಗಿರುವುದರಿಂದ ಹೈನುಗಾರಿಕೆಗೆ ಒದಗಿರುವ ಸಮಸ್ಯೆ ಮೊದಲಾದವುಗಳ ಬಗ್ಗೆ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಅಂದಾಜು 100 ಕೋಟಿ ರೂ. ಪರಿಹಾರ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
► Follow us on –  Facebook / Twitter  / Google+

Sri Raghav

Admin