ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಇಲ್ಲಿದೆ ಒಂದು ಸಮಾಧಾನಕರ ಸುದ್ದಿ..!

Cancer--01

ಬೆಂಗಳೂರು, ಡಿ.13- ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳ ವೈದ್ಯಕೀಯ ವೆಚ್ಚ ಭರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇನ್ನು ಮುಂದೆ ಪ್ರತಿ ತಿಂಗಳು 500 ರೂ. ಆರ್ಥಿಕ ನೆರವು ನೀಡಲಿದೆ. ಈ ಪ್ರಕಾರ ದೇಶಾದ್ಯಂತ 35 ಲಕ್ಷ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವವರು ಮಾಸಿಕ 500 ರೂ. ನೆರವು ಪಡೆಯಲಿದ್ದಾರೆ. ರಾಜ್ಯದಲ್ಲಿರುವ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ.   ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಯೋಜನೆ ಪ್ರಕಾರ ಆದಿವಾಸಿಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಈ ಯೋಜನೆ ನೆರವು ದೊರಕಲಿದೆ.

ಕೇಂದ್ರ ಸರ್ಕಾರ ಮಾಡಿರುವ ನೂತನ ಮಾರ್ಗಸೂಚಿ ಪ್ರಕಾರ ಯಾವುದೇ ಒಬ್ಬ ಕ್ಯಾನ್ಸರ್ ರೋಗಿ ಚಿಕಿತ್ಸೆ ಇಲ್ಲದೆ ಅಸುನೀಗಬಾರದು. ಅವರಿಗೆ ನೈತಿಕ ಬೆಂಬಲ ನೀಡಲು 500 ರೂ. ನೀಡುತ್ತಿದ್ದೇವೆ. ಈಗಾಗಲೇ ಇದರ ಪೂರ್ವಸಿದ್ಧತೆಗಳು ಮುಗಿದಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದರೆ ಜ.1 ರಿಂದಲೇ ಇದು ದೇಶಾದ್ಯಂತ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಒಟ್ಟು 35 ಲಕ್ಷ ಕ್ಯಾನ್ಸರ್ ರೋಗಿಗಳು ಇದ್ದಾರೆಂದು ಅಂದಾಜಿಸಲಾಗಿದೆ. ದೇಶದ ಅತಿ ದೊಡ್ಡ ರಾಜ್ಯವೆನಿಸಿದ ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ರೋಗಿಗಳಿದ್ದಾರೆ.

ಕ್ಯಾನ್ಸರ್ ರೋಗವನ್ನು ದೇಶದಿಂದಲೇ ಸಂಪೂರ್ಣವಾಗಿ ಮುಕ್ತಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಣತೊಟ್ಟಿವೆ. ಆದರೂ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಇಳಿಮುಖವಾಗುತ್ತಿಲ್ಲ.  ಒಂದೆಡೆ ಕ್ಯಾನ್ಸರ್ ರೋಗ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ಈ ರೋಗಕ್ಕೆ ತುತ್ತಾದವರು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗಿದೆ.

Sri Raghav

Admin