ಕ್ಷುಲ್ಲಕ ಕಾರಣಕ್ಕೆ ಜಗಳ : ವ್ಯಕ್ತಿಯ ತಂದೆ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ 

pandavapura

ಪಾಂಡವಪುರ, ಮಾ.4- ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವೇರ್ಪಟ್ಟು ಜಗಳ ಮಾಡಿದ ವ್ಯಕ್ತಿಯ ತಂದೆ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಈತನನ್ನು ಜಗಳದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಕೆ.ಆರ್.ಪೇಟೆ ತಾಲೂಕಿನ ವೆಂಕಟರಾಜಪುರ ಗ್ರಾಮದ ಕೊರಮಶೆಟ್ಟಿ ಜನಾಂಗಕ್ಕೆ ಸೇರಿದ ನಾಗರಾಜು (55) ಎಂಬಾತ ಮೃತ ವ್ಯಕ್ತಿ.ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮೃತ ವ್ಯಕ್ತಿಯ ಮಗ ರಾಜು ಹಾಗೂ ಗ್ರಾಮದ ನಿವಾಸಿಗಳಾದ ಡೆಡ್ಲಿ ಸೋಮ ಇವರುಗಳ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ. ನಂತರ ರಾಜು ಸ್ಥಳದಿಂದ ತೆರಳಿದ್ದ ಎಂದು ಹೇಳಲಾಗಿದೆ.

ಇದರಿಂದ ಕುಪಿತಗೊಂಡ ಡೆಡ್ಲಿ ಸೋಮ ಹಾಗೂ ಆತನ ಹೆಂಡತಿ ಪವಿತ್ರ, ಸಹೋದರ ರಮೇಶ ಹಾಗೂ ದೇವರಾಜು ಎಂಬುವರು ರಾಜುಗಾಗಿ ಹುಡುಕಾಟ ನಡೆಸಿದ್ದಾರೆ. ಆತ ಸಿಗದ ಕಾರಣ ಮನೆಗೆ ತೆರಳಿ ರಾಜು ಅವರ ತಂದೆ ನಾಗರಾಜು ಜತೆ ಮಾತಿನ ಚಕಮಕಿ ನಡೆಸಿ ನಾಗರಾಜು ಅವರ ಕಪಾಳಕ್ಕೆ ಬಲವಾಗಿ ಹೊಡೆದಿದ್ದಾರೆ ಎಂದು ಹೇಳಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿ ಸ್ಥಳದಲ್ಲಿಯೇ ಕುಸಿದು ಬಿದ್ದರು. ನಂತರ ಆತನನ್ನು ಚಿಕಿತ್ಸೆಗಾಗಿ ಪಾಂಡವಪುರ ತಾಲೂಕಿನ ಚಿನಕುರಳಿ ಆಸ್ಪತ್ರೆಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ನಮ್ಮ ತಂದೆಯನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರೂ ದೂರು ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಮೃತ ನಾಗರಾಜು ಅವರ ಮಗ ರಾಜು ದೂರಿದ್ದಾರೆ.ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಿದ್ದು, ಶವ ಪರೀಕ್ಷೆ ನಂತರ ವಾರಸುದಾರರಿಗೆ ಶವವನ್ನು ಒಪ್ಪಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆ ಬಳಿ ಮೃತರ ಕುಟುಂಬ ವರ್ಗದವರ ಆಕ್ರಂದನ ಮುಗಿಲುಮುಟ್ಟಿತ್ತು.

< Eesanje News 24/7 ನ್ಯೂಸ್ ಆ್ಯಪ್  

 Click Here to Download  :  Android / iOS  

Sri Raghav

Admin