ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳದಿದ್ದರೆ ಟಿಕೆಟ್ ಇಲ್ಲ : ಕೆಪಿಸಿಸಿ

kpcc

ಬೆಂಗಳೂರು, ಸೆ.20-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಈಗಲಾದರೂ ಶಾಸಕರು ಎಚ್ಚೆತ್ತುಕೊಂಡು ಪಕ್ಷ ಸಂಘಟನೆ ಮಾಡುವುದರೊಂದಿಗೆ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳದಿದ್ದರೆ ಟಿಕೆಟ್ ಸಿಗುವುದಿಲ್ಲ ಎಂಬ ಸಂದೇಶ ಕೆಪಿಸಿಸಿಯಿಂದ ರವಾನೆಯಾಗಿದೆ. ಕಾಂಗ್ರೆಸ್‍ನ 40 ಮಂದಿ ಶಾಸಕರಿಗೆ ಪಕ್ಷದ ಟಿಕೆಟ್ ಕೈ ತಪ್ಪಲಿದೆ ಎಂಬ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭೇಟಿ ಮಾಡಿ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಈ ಬಗ್ಗೆ ಚರ್ಚೆ ನಡೆಸಿದರು.

ಕಾರ್ಯವೈಖರಿ ಸಮೀಕ್ಷೆಯಲ್ಲಿ ಸುಮಾರು 40 ಮಂದಿ ಶಾಸಕರು ಹಿನ್ನಡೆ ಅನುಭವಿಸಿದ್ದಾರೆ ಎಂಬ ಮಾಹಿತಿ ಇದ್ದು, ಇದನ್ನು ಆಧರಿಸಿ ಆಯಾ ಕ್ಷೇತ್ರಗಳಲ್ಲಿ ಬೇರೆ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿದೆ. ಸೋಲುವ ಕ್ಷೇತ್ರದಲ್ಲಿ ಪರ್ಯಾಯವಾಗಿ ಮೂರು-ನಾಲ್ಕು ಪ್ರಬಲ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಂತೆ ಕೆಪಿಸಿಸಿ ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ಸೂಚನೆ ನೀಡಿದೆ. ಇದು ಪಕ್ಷದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡಿದೆ. ಬಹುತೇಕ ಕಾಂಗ್ರೆಸ್ ನಾಯಕರು ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್‍ನತ್ತ ಮುಖ ಮಾಡಲು ಚಿಂತಿಸಿದ್ದು, ಸಚಿವ ಸ್ಥಾನ ಹಾಗೂ ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗದೆ ಅತೃಪ್ತರಾಗಿರುವ ಶಾಸಕರು ಪಕ್ಷ ಸಂಘಟನೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡಿದೆ.

ಸದಸ್ಯರ ನೋಂದಣಿ ಅಧ್ಯಯನವನ್ನು ಶಾಸಕರು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷಿಸಿದ್ದರು. ಚುನಾವಣಾ ತಯಾರಿ ಸಲುವಾಗಿ ಬೂತ್‍ಮಟ್ಟದ ಕಮಿಟಿಗಳನ್ನು ಮಾಡುವಂತೆ ಕೆಪಿಸಿಸಿ ಸೂಚಿಸಿತ್ತು. ಆದರೆ ಈ ವಿಷಯದಲ್ಲೂ ಕಾಂಗ್ರೆಸ್‍ನ ಕೆಲ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಪರ್ಯಾಯ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಹೊಸ ತಳಮಳ ಹುಟ್ಟು ಹಾಕಿದ್ದು, ಶಾಸಕರು ಕೂಡ ತಮ್ಮ ರಾಜಕೀಯ ಭವಿಷ್ಯದ ಮುಂದಿನ ಹಾದಿ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಕಾಂಗ್ರೆಸ್‍ನ ರಾಮಕೃಷ್ಣ ದೊಡ್ಡಮನಿ , ಮಾಲೀಕಯ್ಯ ಗುತ್ತೇದಾರ್, ಬಸವರಾಜ ಶಿವಣ್ಣನವರ್, ಮನೋಹರ್ ತಹಸೀಲ್ದಾರ್, ಕೆ.ವಿ.ಪ್ರಸನ್ನಕುಮಾರ್, ಎಂ.ಪಿ.ರವೀಂದ್ರ, ಎಚ್.ಪಿ.ರಾಜೇಶ್, ಜಯಣ್ಣ, ಸುಧಾಕರ್ ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಮಂದಿ ಶಾಸಕರು ಹಿನ್ನಡೆ ಅನುಭವಿಸಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕುವಂತೆ ಕಾಂಗ್ರೆಸ ನಾಯಕರು ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಹೈಕಮಾಂಡ್‍ಗೂ ವಾಸ್ತವ ಪರಿಸ್ಥಿತಿ ಬಗ್ಗೆ ಕೆಪಿಸಿಸಿ ಮನವರಿಕೆ ಮಾಡಿಕೊಟ್ಟಿದೆ. ಚುನಾವಣೆಗೆ ಏಳು ತಿಂಗಳ ಕಾಲಾವಕಾಶವಿದ್ದು, ಆ ವೇಳೆಗೆ ಶಾಸಕರು ಎಚ್ಚೆತ್ತುಕೊಂಡು ಕ್ಷೇತ್ರವನ್ನು ಬಲಪಡಿಸಿಕೊಳ್ಳದಿದ್ದರೆ ಟಿಕೆಟ್ ಸಿಗುವುದು ಕಷ್ಟವೆಂಬ ಸಂದೇಶ ರವಾನಿಸಿದೆ.

Sri Raghav

Admin