ಖಾಲಿ ಇರುವ ಪೊಲೀಸ್ ಹುದ್ದೆಗಳ ವಿವರ ಸಲ್ಲಿಸಲು ಎಲ್ಲಾ ರಾಜ್ಯಗಳಿಗೂ ಸುಪ್ರೀಂ ಸೂಚನೆ

supreme-ocurt

ನವದೆಹಲಿ, ಜ.24- ಪೊಲೀಸ್ ಸೇವೆಗಳ ಎಲ್ಲಾ ಮಟ್ಟಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ವಿವರಗಳನ್ನು ಒಳಗೊಂಡ ಅಫಿಡೆವಿಟ್‍ಗಳನ್ನು ಸಲ್ಲಿಸುವಂತೆ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಗೃಹ ಕಾರ್ಯದರ್ಶಿಗಳಿಗೆ ಸುಪ್ರೀಂಕೋರ್ಟ್ ಇಂದು ಸೂಚನೆ ನೀಡಿದೆ. ಇದರೊಂದಿಗೆ ದೇಶಾದ್ಯಂತ ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇರುವ 5.42 ಲಕ್ಷ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ. ಮುಖ್ಯನ್ಯಾಯಮೂರ್ತಿ ಜಗದೀಶ್‍ಸಿಂಗ್ ಖೇಹರ್ ನೇತೃತ್ವದ ನ್ಯಾಯಪೀಠವು ಈ ಕುರಿತ ಮನವಿ ಬಗ್ಗೆ ಇಂದು ವಿಚಾರಣೆ ನಡೆಸಿತು. ಇದು ಅತ್ಯಂತ ಮಹತ್ವದ ವಿಷಯ.

ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಲ್ಕು ವಾರಗಳ ಒಳಗೆ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೂ ಪೀಠವು ಆದೇಶ ನೀಡಿತು. ಅಫಿಡೆವಿಡ್ ಸಲ್ಲಿಸಲು ಯಾವುದೇ ರಾಜ್ಯ ವಿಫಲವಾದಲ್ಲಿ ಈ ವಿಷಯದ ವಿಲೇವಾರಿಗಾಗಿ ನ್ಯಾಯಾಲಯಕ್ಕೆ ನೆರವು ನೀಡಲು ಅಗತ್ಯವಾದ ಎಲ್ಲ ದಾಖಲೆಗಳೊಂದಿಗೆ ಗೃಹ ಸಚಿವರು ಖುದ್ದಾಗಿ ಹಾಜರಿರಬೇಕೆಂದು ನ್ಯಾಯಮೂರ್ತಿಗಳಾದ ಎಂ.ವಿ.ರಮಣ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ತಿಳಿಸಿದೆ.

ಈ ವಿಷಯದ ಮಹತ್ವವನ್ನು ಪರಿಗಣಿಸಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಫಿಡೆವಿಟ್‍ಗಳನ್ನು ಎಲ್ಲಾ ರಾಜ್ಯಗಳ ಗೃಹ ಕಾರ್ಯದರ್ಶಿಗಳು ಸಲ್ಲಿಸಬೇಕು. ಇನ್ನು ನಾಲ್ಕು ವಾರಗಳ ಒಳಗೆ ಈ ಪ್ರಕ್ರಿಯೆ ನಡೆಯಬೇಕು. ಈ ಸಂಬಂಧ ಇನ್ನೊಂದು ವಾರದೊಳಗೆ ಎಲ್ಲಾ ರಾಜ್ಯ ಸರ್ಕಾರಗಳ ಗೃಹ ಕಾರ್ಯದರ್ಶಿಗಳಿಗೆ ಈ ಆದೇಶವನ್ನು ಕೇಂದ್ರ ಸರ್ಕಾರ ರವಾನೆ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ. ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳ ವಿವಿಧ ಮಟ್ಟಗಳಲ್ಲಿ ಬೃಹತ್ ಸಂಖ್ಯೆಯ ಹುದ್ದೆಗಳು ಖಾಲಿ ಇರುವ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ದೇಶಾದ್ಯಂತ ಪೊಲೀಸ್ ಇಲಾಖೆಗಳಲ್ಲಿ 5.42 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin