ಗಡಿಯಲ್ಲಿ ಉಗ್ರರ ಅಟ್ಟಹಾಸ : ಜಿಆರ್‍ಇಎಫ್ ಶಿಬಿರದ ಮೇಲೆ ದಾಳಿ, ಮೂವರು ಕಾರ್ಮಿಕರ ಹತ್ಯೆ

Spread the love

Border-Firing

ಜಮ್ಮು, ಜ.9- ಕಳೆದ ಕೆಲವು ದಿನಗಳಿಂದ ಬಾಲ ಮುದುರಿಕೊಂಡಿದ್ದ ಉಗ್ರರು ಜಮ್ಮು ಮತ್ತು ಕಾಶ್ಮೀರದ ಅಕ್ನೂರ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಪುಂಡಾಟ ಮುಂದುವರಿಸಿದ್ದು, ಇಲ್ಲಿನ ಜನರಲ್ ಎಂಜಿನಿಯರಿಂಗ್ ರಿಸರ್ವ್ ಫೋರ್ಸ್ (ಜಿಆರ್‍ಇಎಫ್) ಶಿಬಿರದ ಮೇಲೆ ಇಂದು ನಸುಕಿನಲ್ಲಿ ದಾಳಿ ನಡೆಸಿ ಮೂವರು ಕಾರ್ಮಿಕರನ್ನು ಹತ್ಯೆ ಮಾಡಿದ್ದಾರೆ. ನೋಟು ರದ್ದತಿ ನಂತರ ಕಾಶ್ಮೀರದಲ್ಲಿ ಶೇ.60ರಷ್ಟು ಹಿಂಸಾಚಾರ ಕಡಿಮೆಯಾಗಿದ್ದು, ಉಗ್ರರ ದಾಳಿ ಗಣನೀಯವಾಗಿ ಇಳಿಮುಖವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದ ಬೆನ್ನಲ್ಲೇ ಭಯೋತ್ಪಾದಕರು ಮತ್ತೆ ಕೌರ್ಯ ಮೆರೆದಿದ್ದಾರೆ.

ಬಟ್ಟಲ್ ಗ್ರಾಮದಲ್ಲಿ ಎಲ್‍ಒಸಿ ಬಳಿ ಇಂದು ಮುಂಜಾನೆ 1 ಗಂಟೆ ಸುಮಾರಿನಲ್ಲಿ ಇಬ್ಬರಿಂದ ಮೂವರು ಉಗ್ರರು ಜಿಆರ್ ಇಆರ್‍ಇಎಫ್ ಶಿಬಿರದ ಮೇಲೆ ಹಠಾತ್ತನೆ ನುಗ್ಗಿ ಗ್ರೆನೇಡ್ ಎಸೆದು ಗುಂಡಿನ ಸುರಿಮಳೆಗೆರೆದರು. ಈ ದಾಳಿಯಲ್ಲಿ ಶಿಬಿರದಲ್ಲಿದ್ದ ಮೂವರು ಕೂಲಿಗಾರರು ಹತರಾದರು. ಈ ಕೃತ್ಯ ಎಸಗಿದ ನಂತರ ಉಗ್ರರು ಕತ್ತಲಲ್ಲಿ ಕಣ್ಮರೆಯಾದರು. ಭಯೋತ್ಪಾದನೆ ದಾಳಿ ನಡೆಸಲು ಉಗ್ರರು ಗಡಿಯಿಂದ ಒಳ ನುಸುಳಿರುವ ಸಾಧ್ಯತೆ ಇದೆ ಎಂದು ಸೇನಾಧಿಕಾರಿಯೊಬ್ಬರು ಶಂಕಿಸಿದ್ದಾರೆ.  ಪರಾರಿಯಾಗಿರುವ ಭಯೋತ್ಪಾದಕರಿಗಾಗಿ ಭದ್ರತಾಪಡೆ ಮತ್ತು ಪೊಲೀಸರು ಈ ಪ್ರದೇಶವನ್ನು ಸುತ್ತುವರೆದು ವ್ಯಾಪಕ ಶೋಧ ಮುಂದುವರಿಸಿದ್ದಾರೆ.

ಈ ಪ್ರದೇಶದಿಂದ ಹೊರಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲಿ ತೀವ್ರ ಶೋಧ ನಡೆಯುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಶ್ಮೀರದ ಗಡಿಯಾಚೆ ಇರುವ ಉಗ್ರರ ನೆಲೆಗಳ ಮೇಲೆ ಮತ್ತೊಮ್ಮೆ ಸರ್ಜಿಕಲ್ ದಾಳಿ ನಡೆಸುವ ಬಗ್ಗೆ ಭೂಸೇನೆ ನೂತನ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗಂಭೀರ ಚಿಂತನೆ ನಡೆಸುತ್ತಿರುವಾಗಲೇ ಉಗ್ರರಿಂದ ಈ ಆಕ್ರಮಣ ನಡೆದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin