ಗಡಿಯಲ್ಲಿ ನಿಲ್ಲದ ಎನ್‍ಕೌಂಟರ್‍ : ಉಗ್ರನೊಬ್ಬನ ಹತ್ಯೆ, ಇಬ್ಬರು ಸೈನಿಕರಿಗೆ ಗಾಯ

Spread the love

Encounter-----0252'

ಶ್ರೀನಗರ, ನ.7-ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‍ನಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಯೋಧರು ಪಾಕಿಸ್ತಾನ ಬೆಂಬಲಿತ ಉಗ್ರನೊಬ್ಬನನ್ನು ಹೊಡೆದುರುಳಿಸಿದ್ದಾರೆ. ಈ ಎನ್‍ಕೌಂಟರ್‍ನಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.  ದಕ್ಷಿಣ ಕಾಶ್ಮೀರದ ಶೋಪಿಯಾನ್‍ನ ವಾನ್‍ಗಮ್‍ನಲ್ಲಿ ಉಗ್ರಗಾಮಿಗಳು ಇರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ 62ನೇ ರಾಷ್ಟೀಯ ರೈಫಲ್ಸ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಜಂಟಿ ಪಡೆ ಕಳೆದ ರಾತ್ರಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದಾಗ ಭೀಕರ ಗುಂಡಿನ ಕಾಳಗ ನಡೆಯಿತು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತನಾದ ಉಗ್ರನನ್ನು ಛತ್ರಿಪೋರಾ ಶೋಪಿಯಾನ್‍ನ ನಿವಾಸಿ ಸದ್ದಾಂ ಹುಸೇನ್ ಮಿರ್ ಎಂದು ಗುರುತಿಸಲಾಗಿದೆ. ಈತ ಹಿಬ್‍ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ್ದು, 1 ಎಕೆ-47 ರೈಫಲ್, ಐದು ಮ್ಯಾಗಝೈನ್‍ಗಳು, 119 ಗುಂಡುಗಳು ಹಾಗೂ ಒಂದು ಹ್ಯಾಂಡ್ ಗ್ರೆನೇಡ್‍ನನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಉಗ್ರರು ಪರಾರಿಯಾಗಿರುವ ಸಾಧ್ಯತೆ ಇದ್ದು, ಶೋಧ ಮುಂದುವರೆದಿದೆ.  ಎನ್‍ಕೌಂಟರ್‍ನಲ್ಲಿ ಗಾಯಗೊಂಡ ಇಬ್ಬರು ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಾಶ್ಮೀರ ಕಣಿವೆಯಲ್ಲಿ 300ಕ್ಕೂ ಹೆಚ್ಚು ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ರಾಜೇಂದ್ರ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಉಗ್ರನೊಬ್ಬ ಎನ್‍ಕೌಂಟರ್‍ನಲ್ಲಿ ಹತನಾಗಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin