ಗಡಿಯಲ್ಲಿ ಪಾಕ್ ನಿರಂತರ ಗುಂಡಿನ ದಾಳಿ : ಕಾಶ್ಮೀರ ಉದ್ವಿಗ್ನ

Firinbg-002

ಜಮ್ಮು, ಅ.28-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ರೇಂಜರ್‍ಗಳ ಪುಂಡಾಟ ಮುಂದುವರಿದಿದೆ. ಭಾರತೀಯ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟು ಕೊಂಡು ಪಾಕಿಗಳು ಮುಂದುವರಿಸಿರುವ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳು ಸೇರಿದಂತೆ ಹಲವು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಇದೇ ವೇಳೆ ಕದನ ವಿರಾಮ ಉಲ್ಲಂಘಿಸಿದರೆ ಸೂಕ್ತ ಪ್ರತ್ಯುತ್ತರ ನೀಡು ವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಬಿಎಸ್‍ಎಫ್ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.  ಜಮ್ಮು ಜಿಲ್ಲೆಯ ರಜೌರಿಯ ಸುಂದರ್‍ಬನಿ, ನೌಶೀರಾ ಮತ್ತು ಪಲಾನ್‍ವಾಲಾ ಸೆಕ್ಟರ್‍ನಲ್ಲಿ ನಿನ್ನೆ ರಾತ್ರಿಯಿಡಿ ಪಾಕಿಸ್ತಾನಿ ಯೋಧರು ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದರು. ಕತುವಾ ಜಿಲ್ಲೆ ಅಂತಾರಾಷ್ಟ್ರೀಯ ಗಡಿ ಬಳಿಯೂ ಪಾಕ್ ಕ್ಯಾತೆ ತೆಗೆದಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಪಾಕಿನಿಂದ ಕದನ ವಿರಾಮಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಿರುವ ವರದಿಗಳು ಬಂದಿವೆ. ಭಾರತೀಯ ಯೋಧರೂ ಸಹ ಪ್ರತಿ ದಾಳಿ ನಡೆಸಿ ಪಾಕಿಗಳ ಹುಟ್ಟಡಗಿಸುವ ಪರಾಕ್ರಮ ಮುಂದುವರಿಸಿದ್ದಾರೆ. ಇದರಿಂದ ಗಡಿ ಭಾಗದಲ್ಲಿ ಸಮರ ಸದೃಶ ವಾತಾವರಣ ಸೃಷ್ಟಿಯಾಗಿದೆ.

ಇದೇ ವೇಳೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗಡಿ ಭದ್ರತಾ ಪಡೆ ಮುಖ್ಯಸ್ಥರ ಜೊತೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಪ್ರಚೋದಿತ ದಾಳಿಗೆ ದಿಟ್ಟ ಉತ್ತರ ನೀಡುವಂತೆ ಸೂಚನೆ ನೀಡಿದ್ಧಾರೆ.  ಅಂತಾರಾಷ್ಟ್ರೀಯ ಗಡಿಯಲ್ಲಿನ ಆರ್‍ಎಸ್ ಪುರ ಮತ್ತು ಅರ್ನಿಯಾ ಸೆಕ್ಟರ್‍ನಲ್ಲಿ 15 ಸೇನಾ ನೆಲೆಗಳು ಮತ್ತು 29 ಗ್ರಾಮಗಳ ಮೇಲೆ ಮೋರ್ಟಾರ್ ಬಾಂಬ್‍ಗಳು ಮತ್ತು ಸ್ವಯಂಚಾಲಿತ ಬಂದೂಕುಗಳಿಂದ ಮೊನ್ನೆ ಪಾಕಿಸ್ತಾನ ಯೋಧರು ದಾಳಿ ನಡೆಸಿದ್ದರು.

ಗುಂಡೇಟಿನಿಂದ ತೀವ್ರ ಗಾಯಗೊಂಡ ಬಿಹಾರ್ ಮೋತಿಹಾರ್ ಜಿಲ್ಲೆಯ ಬಿಎಸ್‍ಎಫ್ ಯೋಧ ಜಿತೇಂದ್ರ ಕುಮಾರ್ ಹುತಾತ್ಮನಾಗಿದ್ದು, ಕೆಲವು ಗ್ರಾಮಸ್ಥರು ಗಾಯಗೊಂಡಿದ್ದರು.
ಕಾಶ್ಮೀರದಲ್ಲೂ ಉಗ್ರರ ಉಪಟಳ: ಕಾಶ್ಮೀರ ಕಣಿವೆಯಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದರ ಅಟ್ಟಹಾಸ ಆತಂಕ ಸೃಷ್ಟಿಸಿದೆ. ಶಾಲೆಗಳನ್ನು ಧ್ವಂಸಗೊಳಿಸುವುದು ಮತ್ತು ಬ್ಯಾಂಕ್‍ಗಳನ್ನು ಲೂಟಿ ಮಾಡುವುದು ಲಷ್ಕರ್ ಉಗ್ರರ ಹೊಸ ತಂತ್ರವಾಗಿದೆ. ಒಟ್ಟು 21 ಶಾಲೆಗಳಿಗೆ ಬೆಂಕಿ ಹಚ್ಚಿರುವ ಉಗ್ರರು, ಎರಡು ಬ್ಯಾಂಕ್‍ಗಳನ್ನು ಲೂಟಿ ಮಾಡಿದ್ದಾರೆ.  ಕುಲ್ಗಾಂನಲ್ಲಿನ ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಶಾಖೆ ಮೇಲೆ ಬುಧವಾರ ದಾಳಿ ನಡೆಸಿದ ಶಸ್ತ್ರಸಜ್ಜಿತ ಲಷ್ಕರ್ ಉಗ್ರರು 2 ಲಕ್ಷ ರೂ. ನಗದು ಮತ್ತು ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇನ್ನೊಂದೆಡೆ ಮಧ್ಯ ಕಾಶ್ಮೀರದಲ್ಲಿ ಆಗತಾನೇ ಹಣ ತುಂಬಿಸಿದ್ದ ಎಟಿಎಂ ಯಂತ್ರವನ್ನು ಅಪಹರಿಸಲಾಗಿದೆ.

ಬ್ಯಾಂಕ್‍ಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಉಗ್ರರು ದಕ್ಷಿಣ ಕಾಶ್ಮೀರದ ಅನೇಕ ಭಾಗಗಳಲ್ಲಿ ಪೋಸ್ಟರ್‍ಗಳನ್ನು ಅಂಟಿಸಿದ್ದಾರೆ. ಪ್ರತ್ಯೇಕತಾವಾದಿಗಳ ಹೋರಾಟಕ್ಕೆ ಬ್ಯಾಂಕ್‍ಗಳ ಬೆಂಬಲ ನೀಡಬೇಕು. ಅವರು ಪ್ರತಿಭಟನೆ ನಡೆಸುವಾಗ ಬ್ಯಾಂಕ್‍ಗಳನ್ನು ಬಂದ್ ಮಾಡಬೇಕು ಹಾಗೂ ಸಂಜೆ 5 ಗಂಟೆ ನಂತರ ಮಾತ್ರ ವಹಿವಾಟು ನಡೆಸಬೇಕೆಂಬ ಬೇಡಿಕೆಗಳನ್ನು ಭಿತ್ತಿಪತ್ರಗಳಲ್ಲಿ ತಿಳಿಸಿದ್ದಾರೆ. ಈ ಪೋಸ್ಟರ್‍ಗಳಿಗೆ ಲಷ್ಕರ್ ಜಿಲ್ಲಾ ಕಮಾಂಡರ್ ಸಹಿ ಮಾಡಿದ್ದಾನೆ. ಈ ಷರತ್ತುಗಳನ್ನು ಮೀರಿದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕಾಶ್ಮೀರ ಕಣಿವೆಯ ವಿವಿಧೆಡೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‍ಗಳ ಮೇಲೆ ಉಗ್ರರು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿನ ಜೆ ಅಂಡ್ ಕೆ ಬ್ಯಾಂಕ್‍ನ ಬಹುತೇಕ ಶಾಖೆಗಳು ಮುಚ್ಚಲ್ಪಟ್ಟಿವೆ. ಶ್ರೀನಗರದ ಕೆಲವು ಮಾತ್ರ ಬೆಳಿಗ್ಗೆ 7 ರಿಂದ ಬೆಳಿಗ್ಗೆ 11ರವರೆಗೆ ಕಾರ್ಯನಿರ್ವಹಿಸುತ್ತಿದ್ದು, ಈಗ ಈ ವಹಿವಾಟಿಗೂ ಉಗ್ರಗಾಮಿಗಳಿಂದ ಬೆದರಿಕೆ ಉಂಟಾಗಿದೆ.

ಶಾಲೆಗಳ ಮೇಲೆ ದಾಳಿ :

ಇನ್ನೊಂದೆಡೆ ಪಾಕ್ ಮತ್ತು ಅಫ್ಘನ್‍ನಲ್ಲಿ ಶಾಲೆಗಳ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸುತ್ತಿರುವ ರೀತಿಯಲ್ಲೇ ಕಾಶ್ಮೀರ ಶಿಕ್ಷಣ ಸಂಸ್ಥೆಗಳನ್ನು ಲಷ್ಕರ್ ಭಯೋತ್ಪಾದಕರು ಧ್ವಂಸಗೊಳಿಸುತ್ತಿದ್ದಾರೆ. ಉತ್ತರ ಕಾಶ್ಮೀರದ ಪಠಾಣ್‍ನ ತಾಪರ್‍ನಲ್ಲಿ ನಿನ್ನೆ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಇದರೊಂದಿಗೆ ಅಗ್ನಿಗಾಹುತಿಯಾದ ಶಾಲೆಗಳ ಸಂಖ್ಯೆ 21ಕ್ಕೆ ಏರಿದೆ.  ಹಿಜ್‍ಬುಲ್ ಭಯೋತ್ಪಾದಕ ಬುರ್‍ಹಾನ್ ವಾನಿ ಜುಲೈ 8ರಂದು ಹತನಾದ ನಂತರ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಲಷ್ಕರ್ ಬೆಂಬಲಿತ ಪ್ರತಿಭಟನೆಕಾರರು ಈ ಕೃತ್ಯ ಎಸಗಿದ್ದಾರೆ.  ಕಣಿವೆಯಲ್ಲಿ ಶಾಲಾ-ಕಾಲೇಜುಗಳು ಆರಂಭಿಸಲು ಯತ್ನಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಲಷ್ಕರ್ ವಕ್ತಾರ ಅಬ್ದುಲ್ಲಾ ಘಜ್ನವಿ ಕಾಶ್ಮೀರದ ಶಿಕ್ಷಣ ಸಚಿವ ನಯೀಮ್ ಅಖ್ತರ್‍ಗೆ ಈ ಹಿಂದೆ ಬೆದರಿಕೆ ಒಡ್ಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

► Follow us on –  Facebook / Twitter  / Google+

Sri Raghav

Admin