ಗಡಿ ಕಾಯುವ ಯೋಧರನ್ನು ಕಾಡುತ್ತಿದೆ ಆರೋಗ್ಯ ಸಮಸ್ಯೆ..!

BSF-army

ನವದೆಹಲಿ, ನ.27-ಗಡಿ ಪ್ರದೇಶಗಳಲ್ಲಿ ಉಗ್ರರು ಮತ್ತು ನಕ್ಸಲ್-ನಿಗ್ರಹ ಕಾರ್ಯಾಚರಣೆಗಳಿಗಿಂತ ಬಿಎಸ್‍ಎಫ್ ಯೋಧರು ಹೃದ್ರೋಗ ಮತ್ತು ಇತರ ಅನಾರೋಗ್ಯಗಳಿಗೆ ಬಲಿಯಾಗಿರುತ್ತಿರುವ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ.  ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನಿ ಸೈನಿಕರ ದಾಳಿಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದ ಸಾವುಗಳು ಅನಾರೋಗ್ಯದಿಂದ ಸಂಭವಿಸಿವೆ ಎಂಬುದನ್ನು ಅಧಿಕೃತ ವಿವರಗಳ ಮಾಹಿತಿ ದೃಢಪಡಿಸಿದೆ.
ದೇಶದ 2.75 ಲಕ್ಷ (ಪುರುಷರು ಮತ್ತು ಮಹಿಳೆಯರು) ಸಿಬ್ಬಂದಿ ಹೊಂದಿರುವ ಅತಿದೊಡ್ಡ ಗಡಿ ರಕ್ಷಣಾ ಪಡೆಯಾದ ಬಿಎಸ್‍ಎಫ್‍ನಲ್ಲಿ ಜನವರಿ 2015 ಮತ್ತು ಸೆಪ್ಟೆಂಬರ್ 2016ರ ಅವಧಿಯಲ್ಲಿ ಒಟ್ಟು 774 ಸಾವುಗಳು ಸಂಭವಿಸಿವೆ. ಇದರಲ್ಲಿ ಪಾಕಿಸ್ತಾನದ ಬುಲೆಟ್‍ಗಳು ಮತ್ತು ಮಾರ್ಟರ್‍ಗಳ ದಾಳಿಯಿಂದ ಮೃತಪಟ್ಟ ಯೋಧರ ಸಂಖ್ಯೆ 25 ಮಾತ್ರ.

ಅಂಕಿ-ಅಂಶಗಳ ವಿವರ ಹೀಗಿವೆ:

ಗಡಿಯಲ್ಲಿ ಪಾಕ್ ಜೊತೆ ಗುಂಡಿನ ಚಕಮಕಿಯಲ್ಲಿ 25 ಯೋಧರು ಹುತಾತ್ಮರಾಗಿದ್ದಾರೆ. ವಿವಿಧ ರೋಗಗಳು ಮತ್ತು ಅನಾರೋಗ್ಯದಿಂದ 316 ಹಾಗೂ ಹೃದಯಾಘಾತಗಳಿಂದ 117 ಸಿಪಾಯಿಗಳು ಮೃತಪಟ್ಟಿದ್ದಾರೆ.  ಇದೇ ಅವಧಿಯಲ್ಲಿ ಅರೆಸೇನಾ ಪಡೆಯಲ್ಲಿ ಎಚ್‍ಐವಿ/ಏಡ್ಸ್ ಮತ್ತು ಮಲೇರಿಯಾದಿಂದ ಸಂಭವಿಸುವ ಪ್ರಕರಣಗಳು ಕಡಿಮೆಯಾಗಿದ್ದರೂ, ರೈಲು, ರಸ್ತೆ ಮತ್ತು ಬೈಕ್ ಅಪಘಾತಗಳಲ್ಲಿ ಬಿಎಸ್‍ಎಫ್ ಸಿಬ್ಬಂದಿ ಸಾವಿಗೀಡಾಗುತ್ತಿರುವ ಪ್ರಕರಣಗಳು ಮುಂದುವರಿದಿ ರುವುದು ಚಿಂತೆಗೀಡು ಮಾಡುವ ಸಂಗತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಅವಧಿಯಲ್ಲಿ ರಸ್ತೆ ಮತ್ತು ರೈಲು ಅಪಘಾತಗಳಿಂದ 192 ಸಾವುಗಳು ಸಂಭವಿಸಿವೆ. ಎಚ್‍ಐವಿ/ಏಡ್ಸ್‍ನಿಂದ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ, 38 ಮಂದಿ ಮಾರಕ ಕ್ಯಾನ್ಸರ್‍ಗೆ ಬಲಿಯಾಗಿದ್ದಾರೆ ಹಾಗೂ ಐವರು ಮಲೇರಿಯಾ ರೋಗಕ್ಕೆ ತುತ್ತಾಗಿದ್ದಾರೆ ಎಂಬ ಅಂಶವನ್ನು ಬಿಎಸ್‍ಎಫ್ ಮಾಜಿ ಮಹಾ ನಿರ್ದೇಶಕ ಡಿ.ಕೆ. ಪಾಠಕ್ ಉಲ್ಲೇಖಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin