ಗಾಂಜಾ ಮಾರಾಟ ಮಾಡುತ್ತಿದ್ದ 5 ಮಂದಿ ಬಂಧನ, 3.50 ಲಕ್ಷ ಮೌಲ್ಯದ ಮಾಲು ವಶ
ಬೆಂಗಳೂರು, ಅ.4- ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ 3.50 ಲಕ್ಷ ರೂ. ಮೌಲ್ಯದ 7.5 ಕೆಜಿ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.ಹೆಗ್ಗನಹಳ್ಳಿಯ ಶಂಕರ್ (27), ಲಗ್ಗೆರೆಯ ಗೌತಮ್ (18), ಯಶವಂತಪುರದ ದೀಪಕ್ ಬರ್ಮನ್ (21), ಉಪೇಂದ್ರನಾಥ್ ಬರ್ಮನ್ (35) ಮತ್ತು ಆರ್ದನ್ ಮಂಡಲ್ (45) ಬಂಧಿತ ಆರೋಪಿಗಳು.
ಆರ್ಎಂಸಿ ಯಾರ್ಡ್ ವ್ಯಾಪ್ತಿಯ ಮಾರಪ್ಪನಪಾಳ್ಯ ಉಲ್ಲಾಸ್ ಚಿತ್ರಮಂದಿರದ ಬಳಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು, ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಶಂಕರ್ ಮತ್ತು ಗೌತಮ್ನನ್ನು ಬಂಧಿಸಿ 50 ಸಾವಿರ ಬೆಲೆಬಾಳುವ 550 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಬಜಾಜ್ ಪಲ್ಸರ್, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದರು.
ಈ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಪಶ್ಚಿಮ ಬಂಗಾಳದವರು ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ಪಕ್ಕದಲ್ಲಿ ನಿರ್ಮಿಸಿರುವ ಗುಡಿಸಲುಗಳಲ್ಲಿ ವಾಸವಾಗಿದ್ದು, ಅವರು ಆಲ್ಲಿರುವ ಖಾಲಿ ಜಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡಲು ನಮಗೆ ಕೊಡುತ್ತಿದ್ದರೆಂದು ತಿಳಿಸಿದ್ದರು.ಈ ಆಧಾರದ ಮೇಲೆ ಆರ್ಎಂಸಿ ಯಾರ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ದೀಪಕ್, ಉಪೇಂದ್ರನಾಥ್ ಮತ್ತು ಆರ್ದನ್ ಮಂಡಲ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ಸ್ಪೆಕ್ಟರ್ ಮೊಹಮ್ಮದ್ ಮುಕಾರಾಂ ಮತ್ತು ಪಿಎಸ್ಐ ರಘುಪ್ರಸಾದ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.
► Follow us on – Facebook / Twitter / Google+