ಗಾಂಧೀಜಿಗೆ ತಾವು ಹತ್ಯೆಯಾಗುವುದು ಮೊದಲೇ ತಿಳಿದಿತ್ತೇ..?

Spread the love

Gandhiji

ಬೆಂಗಳೂರು. ಜ.30 : ಇಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಹಂತಕನೊಬ್ಬನ ಗುಂಡಿಗೆ ಬಲಿಯಾದ ದಿನ. ಇಡೀ ವಿಶ್ವವೇ ಅಂದು ಮಮ್ಮಲ ಮರುಗಿತ್ತು. ದೇಶದ ಮೇಲೆ ಹಿಂಸೆಯ ಕಾರ್ಮೋಡ ಕವಿದಿತ್ತು. ಇಂದು ದೇಶ ಗಾಂಧೀಜಿಯವರಿಗೆ ತಲೆಬಾಗಿ ವಂದಿಸುತ್ತಿದೆ.  ಅಂದಹಾಗೆ, ಗಾಂಧೀಜಿಗೆ ತಾವು ಹತ್ಯೆಯಾಗುವುದು ಮೊದಲೇ ಗೊತ್ತಿತ್ತೇ ಎಂಬ ಪ್ರಶ್ನೆಯೂ ಮೂಡುತ್ತದೆ. ಏಕೆಂದರೆ ಅವರು ಹಂತಕನೊಬ್ಬನ ಗುಂಡಿಗೆ ಬಲಿಯಾಗುವ ಕೇವಲ ಎರಡೇ ದಿನಗಳ ಮುಂಚೆ ಹೇಳಿದ ಮಾತುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

“ಒಂದು ವೇಳೆ ಯಾವನಾದರೊಬ್ಬರು ತಿಕ್ಕಲು ಮನುಷ್ಯನ ಗುಂಡೇಟಿನಿಂದ ನಾನು ಸಾಯುವೆನಾದರೆ, ಖಂಡಿತವಾಗಿಯೂ ಅತ್ಯಂತ ಸಂತಸದಿಂದ ನಗುನಗುತ್ತಲೇ ಆ ಸಾವನ್ನು ಸ್ವಾಗತಿಸುವೆ. ಆ ವೇಳೆ ನನ್ನ ಹೃದಯದಲ್ಲಿ ಭಗವಂತನೇ ತುಂಬಿಕೊಂಡಿರಬೇಕು, ಅಲ್ಲದೆ ನನ್ನ ತುಟಿಗಳ ಮೇಲೂ ಅವನೇ ನಗುವಿನ ರೂಪದಲ್ಲಿ ಸುಳಿದಾಡುತ್ತಿರಬೇಕು. ಅಕಸ್ಮಾತ್ ಅಂಥದ್ದೊಂದು ಘಟನೆ ಘಟಿಸಿದ್ದೇ ಆದರೆ( ನಾನು ಗುಂಡಿಗೆ ಬಲಿಯಾದರೆ) ದಯವಿಟ್ಟು ನೀವ್ಯಾರೂ ನಿಮ್ಮ ಕಣ್ಣಿಂದ ಒಂದೇ ಒಂದು ಹನಿ ನೀರನ್ನೂ ಹಾಕಬಾರದು.”

ಇದು ಗಾಂಧೀಜಿ 1948ರ ಜನವರಿ 28ರಂದು ಸಂಜೆ ಹೇಳಿದ ಮಾತು. ಎಂಥ ಅದ್ಭುತ ಘಳಿಗೆಯಲ್ಲವೆ?  ಇನ್ನೊಂದು ವಿಷಯ ಇಲ್ಲಿ ಸ್ಮರಿಸಬೇಕು. ನಾಥೂರಾಮ್ ಗೋಡ್ಸೆ ಎಂಬ ಮತಾಂಧನೊಬ್ಬ 1948ರ ಜನವರಿ 30ರಂದು ಸಂಜೆ ಮಹಾತ್ಮನನ್ನು ಗುಂಡಿಟ್ಟು ಹತ್ಯೆ ಮಾಡಿದ ಸಂದರ್ಭ ಗಾಂಧೀಜಿ `ಹೇ ರಾಮ್’ ಎಂದು ನೆಲಕ್ಕೆ ಬೀಳುತ್ತಿದ್ದಂತೆ ಅಲ್ಲಿಯೇ ಕೈ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಜೀವದ ಹಂಗು ತೊರೆದು ಒಂದೇ ನೆಗೆತಕ್ಕೆ ಘಟನಾ ಸ್ಥಳಕ್ಕೆ ಹಾರಿ ಹಂತಕನನ್ನು ಹಿಡಿದುಬಿಟ್ಟ.  ತನ್ನ ಕೈಯಲ್ಲಿದ್ದ ಪಿಕಾಸಿಯಿಂದ ಗೋಡ್ಸೆಗೆ ಹೊಡೆದು ನೆಲಕ್ಕೆ ಕೆಡವಿದ. ಅಷ್ಟರಲ್ಲಿ ಜನ ಅಲ್ಲಿಗೆ ಧಾವಿಸಿ ಅವನನ್ನು ಹಿಡಿದುಕೊಂಡರು. ಘಟನೆಯ ನಂತರ ಆ ವ್ಯಕ್ತಿಯನ್ನು ದೇಶ ಮರೆತೇಬಿಟ್ಟಿತು. ಆ ವ್ಯಕ್ತಿ ಶಬರಮತಿ ಆಶ್ರಮದ ತೋಟದ ಮಾಲಿ. ಆ ವ್ಯಕ್ತಿಗೆ ಆಗ 37 ವರ್ಷ.

ಆ ದುರ್ಘಟನೆಯ ನಂತರ ದೇಶ ಆ ಬಡಪಾಯಿಯನ್ನು ಮರೆತೇ ಬಿಟ್ಟಿತು. ಕೆಲ ನಂತರ ಅನಾಮಧೇಯ ವ್ಯಕ್ತಿ ವಿಧಿವಶನಾದ. ಕುಟುಂಬ ಬೀದಿ ಪಾಲಾಯಿತು. ಆದರೆ ಇತ್ತೀಚೆಗಷ್ಟೇ ಒರಿಸ್ಸಾ ಸರ್ಕಾರ ಅಂದಿನ ಆ ಘಟನೆಗೆ ಮರುಜೀವ ನೀಡಿ ಆ ವ್ಯಕ್ತಿಯ ಕುಟುಂಬವನ್ನು ಗುರುತಿಸಿ ಅವನ ವಿಧವಾ ಪತ್ನಿಗೆ 5 ಲಕ್ಷ ರೂ. ಗೌರವಧನ ನೀಡಿತು.   ಬಹುಶಃ ಸ್ವಾತಂತ್ರ್ಯಾ ನಂತರ ಗಾಂಧಿ ಹತ್ಯೆ ಒಂದು ಭೀಕರ ದುರ್ಘಟನೆಯಾದರೆ, ಒರಿಸ್ಸಾ ಸರ್ಕಾರ ಆ ವ್ಯಕ್ತಿಯ ಪತ್ನಿಯನ್ನು ಗುರುತಿಸಿ ಗೌರವಿಸಿದ್ದು ಒಂದು ಒಳ್ಳೆಯ ಕೆಲಸ ಎನ್ನಬಹುದು. ಆ ಪುಣ್ಯಾತ್ಮನ ಹೆಸರು ರಘುನಾಯಕ್ ಅಂತ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin