ಗಾಯಕ್ವಾಡ್ ವಿರುದ್ಧ ಶಿಸ್ತು ಕ್ರಮ : ಉದ್ಧವ್ ಠಾಕ್ರೆ
ಮುಂಬೈ, ಮಾ.25-ಏರ್ಇಂಡಿಯಾದ ಹಿರಿಯ ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿ ವಿವಾದಕ್ಕೆ ಗುರಿಯಾಗಿರುವ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧ ಕ್ರಮ ಜರುಗಿಲು ಶಿವಸೇನೆ ಮುಂದಾಗಿದೆ. ಪಕ್ಷದ ಶಿಸ್ತು ಸಮಿತಿಯಿಂದ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಗಾಯಕ್ವಾಡ್ ಗೂಂಡಾಗಿರಿ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಶಿವಸೇನೆ ಸಿಲುಕಿದೆ.
ಈ ಕುರಿತು ಹೇಳಿಕೆ ನೀಡಿರುವ ಉದ್ದವ್ ಠಾಕ್ರೆ, ಶಿವಸೇನೆ ಶಿಸ್ತು ಸಮಿತಿಯು ಗಾಯಕ್ವಾಡ್ ಅವರನ್ನು ವಿಚಾರಣೆಗೆ ಒಳಪಡಿಸಲಿದೆ. ಆ ನಂತರ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಗತ್ಯವಾದರೆ ಕೈ ಎತ್ತುತ್ತೇವೆ :
ಈ ಮಧ್ಯೆ, ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಿಂದ ಥಳಿಸಿರುವ ಗಾಯಕ್ವಾಡ್ರನ್ನು ಸಮರ್ಥಿಸಿಕೊಂಡಿರುವ ಶಿವಸೇನೆಯ ಮತ್ತೊಬ್ಬ ಸಂಸದ ಸಂಜಯ್ ರಾವುತ್, ಅಗತ್ಯವಾದರೆ ನಾವು ಕೈಎತ್ತುತ್ತೇವೆ ಎಂದು ಉದ್ದಟತನದ ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಪುಣೆಯಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ನಲ್ಲಿ ಸೀಟು ಕೊಡಲಿಲ್ಲ ಎಂಬ ಕಾರಣಕ್ಕಾಗಿ ಗುರುವಾರ ತನ್ನ ತಂದೆ ವಯಸ್ಸಿನ ಶಿವಕುಮಾರ್ ಅವರ ಮೇಲೆ ಗಾಯಕ್ವಾಡ್ 25 ಬಾರಿ ಚಪ್ಪಲಿಯಿಂದ ಥಳಿಸಿ ದೌರ್ಜನ್ಯ ಎಸಗಿದ್ದರು.
< Eesanje News 24/7 ನ್ಯೂಸ್ ಆ್ಯಪ್ >