ಗುಣಮಟ್ಟದ ಕಾಮಗಾರಿಯಿಂದ ಜನ ಮೆಚ್ಚುಗೆ ಗಳಿಸಿ : ಎ.ಮಂಜು ಸಚಿವರ ಸಲಹೆ

Spread the love

ustuvari--manju--asan

ಅರಕಲಗೂಡು, ಸೆ.19- ಸರಕಾರಿ ಸ್ವಾಮ್ಯದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಿ ಜನಮೆಚ್ಚುಗೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸಲಹೆ ಮಾಡಿದರು.ತಾಲೂಕಿನ ಬೈಚನಹಳ್ಳಿಯಲ್ಲಿ ಕೆಆರ್‍ಐಡಿಎಲ್ ವತಿಯಿಂದ ಅಂದಾಜು 24.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ಪಶುಚಿಕಿತ್ಸಾಲಯದ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಸಚಿವನಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಬೈಚನಹಳ್ಳಿಯಲ್ಲಿ 24.80 ಲಕ್ಷ ರೂ. ಹಾಗೂ ಮಲ್ಲಿಪಟ್ಟಣ ಗ್ರಾಮದಲ್ಲಿ 10.60 ಲಕ್ಷ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದೆ. ಅವಧಿಗಿಂತ ಮುಂಚೆಯೇ ಎರಡು ಕಾಮಗಾರಿಗಳನ್ನು ಸುಸಜ್ಜಿತವಾಗಿ ನಿರ್ವಹಿಸಿ ಸಾರ್ವಜನಿಕ ಸೇವೆಗೆ ಕಲ್ಪಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕೆಲವು ಕಾಮಗಾರಿಗಳನ್ನು ನಿಗದಿತ ಅವಧಿ ಹಾಗೂ ಅಲ್ಪಪ್ರಮಾಣದ ಲೋಪಕಂಡು ಬಂದಿದ್ದರಿಂದ ಜನತೆಗೆ ಲ್ಯಾಂಡ್ ಆರ್ಮಿ ಬಗ್ಗೆ ಬೇಸರ ಇತ್ತು. ಆದರೆ ಇತ್ತೀಚೆಗೆ ನಿರ್ವಹಿಸುತ್ತಿರುವ ಕೆಲಸಗಳಿಂದ ಆರೋಪ ದೂರವಾಗಿದೆ. ಮುಂದೆಯೂ ಗುಣಮಟ್ಟದಿಂದ ಕೆಲಸ ಮಾಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಾಮಗಾರಿ ಆರಂಭ: ಕಸಬಾ ಹೋಬಳಿ ಜನತೆಯ ಬಹು ನಿರೀಕ್ಷಿತ ಗಂಗನಾಳು ಏತನೀರಾವರಿ ಯೋಜನೆ ಕೆಲಸ ಸದ್ಯದಲ್ಲಿ ಪೂರ್ಣಗೊಂಡು ಈ ಭಾಗದ 88ಕೆರೆಗಳಿಗೆ ನೀರು ಬರಲಿದೆ. ಇದರಿಂದ 41ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ರೈತರಿಗೂ ನೆರವಾಗಲಿದೆ ಎಂದರು.
ರಸ್ತೆ ಅಭಿವೃದ್ಧಿ :

ಬೈಚನಹಳ್ಳಿ ಕೇಂದ್ರ ಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಹಲವು ಗ್ರಾಮಗಳ ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರಕಾರದಿಂದ ಅನುಮತಿ ದೊರೆತಿದ್ದು, ಸದ್ಯದಲ್ಲೇ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.ಜಿಪಂ ಅಧ್ಯಕ್ಷೆ ಶ್ವೇತಾದೇವರಾಜ್, ಸದಸ್ಯರಾದ ರತ್ನಮ್ಮಲೋಕೇಶ್, ರವಿ, ರೇವಣ್ಣ, ತಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯೆ ಕಾಂತಮ್ಮ, ಗ್ರಾಪಂ ಅಧ್ಯಕ್ಷೆ ರೇವುಕುಮಾರಿ ಶ್ರೀನಿವಾಸ್, ಪಶುಪಾಲನ ಇಲಾಖೆ ಉಪನಿರ್ದೇಶಕ ಡಾ.ಧರ್ಮಪ್ಪ, ಸಹಾಯಕ ನಿರ್ದೇಶಕ ಡಾ.ಜಯರಾಮ್, ಕಾರ್ಯಪಾಲಕ ಅಭಿಯಂತರ ಜಗದೀಶ್, ಎಇಇ ಸಂಗನೂರು, ಡಾ.ಪುಣ್ಯ, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಇತರರು ಹಾಜರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin