‘ಗೊಂದಲಗಳಿಗೆ ಕಿವಿಗೊಡಬೇಡಿ, 2-3 ವಾರದಲ್ಲಿ ಎಲ್ಲವೂ ಸರಿಹೋಗುತ್ತೆ : ಸಾರ್ವಜನಿಕರಲ್ಲಿ ಜೇಟ್ಲಿ ಮನವಿ

Arun-j

ನವದೆಹಲಿ, ನ.12-ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ 500 ಮತ್ತು 1000 ನೋಟುಗಳ ಚಲಾವಣೆಗೆ ನಿಷೇಧ ಹೇರಿರುವುದರಿಂದ ಸಾರ್ವಜನಿಕರಿಗೆ ಇನ್ನೆರಡು ಮೂರು ವಾರಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‍ಜೇಟ್ಲಿ ಹೇಳಿದ್ದಾರೆ. ನೋಟುಗಳಿಗೆ ನಿಷೇಧ ಹೇರಿದ ನಂತರ ಪ್ರತಿಪಕ್ಷಗಳ ಆರೋಪ ಮತ್ತು ಸಾರ್ವಜನಿಕರ ಗೊಂದಲಗಳಿಗೆ ತೆರೆ ಎಳೆದಿರುವ ಜೇಟ್ಲಿ 500 ಮತ್ತು 1000 ನೋಟುಗಳ ಚಲಾವಣೆಗೆ ನಿಷೇಧ ಹೇರಿರುವುದರಿಂದ ಜನತೆ ಆತಂಕಪಡುವ ಅಗತ್ಯವಿಲ್ಲ. ಗೊಂದಲಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದರು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡುತ್ತಿರುವುದರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ನಿಮ್ಮ ಹಣ ಕಾನೂನು ಬದ್ಧವಾಗಿದ್ದರೆ ಒಂದೇ ಒಂದು ಪೈಸೆ ಕೂಡ ನಷ್ಟವಾಗುವುದಿಲ್ಲ. ಎರಡು ಮೂರು ವಾರದೊಳಗೆ ಈ ಗೊಂದಲಗಳು ನಿವಾರಣೆಯಾಗಲಿದೆ ಎಂದರು.

ನಾವು ಯಾರನ್ನೂ ಗುರಿಯಾಗಿಟ್ಟುಕೊಂಡು ಇಲ್ಲವೆ ಇನ್ಯಾರನ್ನೋ ರಕ್ಷಣೆ ಮಾಡುವ ದುರುದ್ದೇಶದಿಂದ ನೋಟುಗಳ ಚಲಾವಣೆಗೆ ನಿಷೇಧ ಹೇರಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಕಾಳದಂಧೆದೋರರು,  ಕಪ್ಪು ಹಣ ನಿಯಂತ್ರಣ ಮತ್ತು ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇದು ಅನಿವಾರ್ಯವಾಯಿತು ಎಂದು ಜೇಟ್ಲಿ ಸಮರ್ಥಿಸಿಕೊಂಡರು. ಬ್ಯಾಂಕ್, ಅಂಚೆಕಚೇರಿಗಳಲ್ಲಿ ಹಣ ಸ್ವೀಕರಿಸುತ್ತಿರುವುದರಿಂದ ಸ್ವಲ್ಪ ಮಟ್ಟಿನ ಗೊಂದಲ ಉಂಟಾಗಿರುವುದು ಸಹಜ. ಏಕಕಾಲಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸಣ್ಣಪುಟ್ಟ ತೊಂದರೆಗಳಾಗಿರುವುದು ಗಮನಕ್ಕೆ ಬಂದಿದೆ. ಆದರೂ ಜನತೆ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.

500 ಮತ್ತು 1000 ನೋಟುಗಳಿಗೆ ನಿಷೇಧ ಹೇರಿರುವುದರಿಂದ ದೇಶದ ಎರಡು ಲಕ್ಷಕ್ಕೂ ಹೆಚ್ಚು ಎಟಿಎಂಗಳಲ್ಲಿ ಹೊಸ ನೋಟುಗಳನ್ನು ಅಳವಡಿಸಲು ತಾಂತ್ರಿಕ ಸಮಸ್ಯೆ ಉಂಟಾಗಿದೆ.
ಹೊಸ ನೋಟುಗಳು ಹಳೇ ಎಟಿಎಂ ಯಂತ್ರಗಳಿಗೆ ಸರಿಹೊಂದುತ್ತಿಲ್ಲ. ಎರಡು ಮೂರು ವಾರಗಳಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ. ಜನರ ತಾಳ್ಮೆ ಬಹು ದೊಡ್ಡದು. ಆದರೆ ವಿಪಕ್ಷಗಳು ಇದರಲ್ಲೂ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.

ಗುಪ್ತಚರ ಬಳಕೆ:

ನೋಟು ನಿಷೇಧವಾದ ಬಳಿಕ ನಾವು ಪ್ರಮುಖ ನಗರಗಳಲ್ಲಿ ಗುಪ್ತಚರ ವಿಭಾಗವನ್ನು ಬಳಸಿಕೊಳ್ಳುತ್ತಿದ್ದೇವೆ. ಎಲ್ಲೆಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂಬ ಹದ್ದಿನ ಕಣ್ಣಿಡಲಾಗಿದೆ.
ಚಿನ್ನದ ಅಂಗಡಿಗಳು, ವೈಯಕ್ತಿಕ ಖಾತೆಗಳ ವಿವರ, ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಸೇರಿದಂತೆ ಮತ್ತಿತರ ಮೇಲೆ ಕಣ್ಣಿಡಲಾಗಿದೆ ಎಂದರು. ಕೆಲವರು ಕಳೆದ ಮೂರು ದಿನಗಳಿಂದ ಹೆಚ್ಚಿನ ದರದಲ್ಲಿ ಚಿನ್ನ ಖರೀದಿ ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆದಾಯ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ನಮ್ಮ ಹಣಕ್ಕೆ ನಾವೇಕೆ ಸರತಿ ಸಾಲಿನಲ್ಲಿ ನಿಂತು ಹಣ ಕಟ್ಟಬೇಕು ಎಂದು ಕೇಳುತ್ತಿದ್ದಾರೆ. ಹಣ ನಿಮ್ಮದಿರಬಹುದು, ಆದರೆ ಅದಕ್ಕೆ ತೆರಿಗೆ ಕಟ್ಟಿದ್ದೀರೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಹಕ್ಕು ಸರ್ಕಾರಕ್ಕಿದೆ ಎಂದು ಕಪಿಲ್ ಸಿಬಾಲ್ ಆರೋಪಕ್ಕೆ ತಿರುಗೇಟು ನೀಡಿದರು. ಇನ್ನು ಕೆಲವರು ದೇಶದಲ್ಲಿ ಉಪ್ಪು ಕಡಿಮೆಯಾಗಿದೆ ಎಂಬ ವದಂತಿಯನ್ನು ಹಬ್ಬಿಸಿದ್ದಾರೆ. ದೇಶದ ಜನತೆಯಲ್ಲಿ ನಮ್ಮ ಮನವಿ ಎಂದರೆ ಯಾವ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬೇಡಿ. ನಿಮ್ಮ ಹಣಕ್ಕೆ ಒಂದು ನಯಪೈಸೆಯಷ್ಟು ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

► Follow us on –  Facebook / Twitter  / Google+

Sri Raghav

Admin