ಗೋವಾದಲ್ಲಿ ಸಿನಿಮೀಯ ಶೈಲಿ ಜೈಲ್ ಬ್ರೇಕ್ ಯತ್ನ, ಕೈದಿ ಹತ್ಯೆ, ಜೈಲರ್’ಗೆ ಗಾಯ

Goa-Jailbrake

ಪಣಜಿ, ಜ.25-ಸುಮಾರು 50 ಜನರ ಅಪರಾಧಿಗಳು ಕಾರಾಗೃಹದಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಲು ಯತ್ನಿಸಿದಾಗ ಉಂಟಾದ ಘರ್ಷಣೆಯಲ್ಲಿ ಕೈದಿಯೊಬ್ಬ ಮೃತಪಟ್ಟು, ಜೈಲರ್, ಇಬ್ಬರು ಗಾರ್ಡ್‍ಗಳು ಹಾಗೂ ಇತರ 11 ಕೈದಿಗಳು ತೀವ್ರ ಗಾಯಗೊಂಡಿರುವ ಘಟನೆ ಗೋವಾದ ಸಾಡಾ ಉಪ ಬಂದೀಖಾನೆಯಲ್ಲಿ ನಡೆಸಿದೆ.  ದಕ್ಷಿಣ ಗೋವಾದ ವಾಸ್ಕೋ ಪಟ್ಟಣದ ಬಳಿ ನಿನ್ನೆ ರಾತ್ರಿ 11ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಕೊಲೆ ಅಪರಾಧಿ ವಿನಾಯಕ್ ಕೊರ್‍ಬಟ್ಕರ್‍ನನ್ನು ಭೀಕರವಾಗಿ ಇರಿದು ಕೊಲೆ ಮಾಡಲಾಗಿದೆ. ಕಳೆದ ವರ್ಷ ಜುಲೈನಲ್ಲಿ ವಿನಾಯಕ್ ಈ ಜೈಲಿಗೆ ಸ್ಥಳಾಂತರಗೊಂಡಿದ್ದ.

ಕೈದಿಗಳ ಸ್ಥಳಾಂತರದ ಕ್ಷುಲ್ಲಕ ಕಾರಣಕ್ಕಾಗಿ ಉಂಟಾದ ಜಗಳವೊಂದು ವಿಕೋಪಕ್ಕೆ ತಿರುಗಿತು. ಸುಮಾರು 50 ಕೈದಿಗಳು ಇಡೀ ಜೈಲನ್ನು ತಮ್ಮ ಒತ್ತೆಯಾಗಿರಿಸಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಕೈದಿಗಳ ಪ್ರಾಬಲ್ಯ ನೋಡಿ ಹೆದರಿ ಓಡುತ್ತಿದ್ದ ಜೈಲರ್ ವಿಠಲ್ ಗವಾಸ್ ಮತ್ತು ಭದ್ರತಾ ಗಾರ್ಡ್‍ಗಳನ್ನು ಬೆನ್ನಟ್ಟಿ ತೀವ್ರ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆಯಲ್ಲಿ ಇತರ 11 ಕೈದಿಗಳೂ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ (ಬಂದೀಖಾನೆ) ಸಿದ್ದಿ ವಿನಾಯಕ್ ನಾಯಕ್ ತಿಳಿಸಿದ್ದಾರೆ.

ಕೈದಿಗಳ ದಾಂಧಲೆಯಲ್ಲಿ ಜೈಲರ್ ಕಚೇರಿಯ ಪೀಠೋಪಕರಣಗಳೂ ಸೇರಿದಂತೆ ಇತರ ವಸ್ತುಗಳು ಧ್ವಂಸಗೊಂಡಿವೆ. ಇದೇ ಸಂದರ್ಭದಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಕೊಲೆ ಅಪರಾಧಿ ವಿನಾಯಕನಿಗೆ ತೀವ್ರ ಇರಿತದ ಗಾಯಗಳಾದವು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಷ್ಟು ಹೊತ್ತಿಗಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು.  ಕೈದಿಗಳು ಭದ್ರತಾ ವ್ಯವಸ್ಥೆಯನ್ನು ಬೇಧಿಸಿ, ಮುಖ್ಯದ್ವಾರದ ಬಳಿ ತಲುಪಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪರಾಧಿಗಳ ಪರಾರಿ ಯತ್ನವನ್ನು ವಿಫಲಗೊಳಿಸಿದರು. ಹಿಂಸಾಚಾರ ನಡೆಸಿದ ಕೈದಿಗಳನ್ನು ವಶಕ್ಕೆ ತೆಗೆದುಕೊಂಡು ಸೆಲ್‍ಗಳಲ್ಲಿ ಇಡಲಾಗಿದೆ ಎಂದು ನಾಯಕ್ ಹೇಳಿದ್ದಾರೆ.

ಗಾಯಗೊಂಡ ಕೈದಿಗಳನ್ನು ಗೋವಾ ಮೆಡಿಕಲ್ ಕಾಲೇಜು ಮತ್ತು ಚಿಕಲಿಂ ಕಾಟೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಚಂದನ್ ಚೌಧರಿ ಇಂದು ಮುಂಜಾನೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin