ಗೌರಿ-ಗಣೇಶ ಹಬ್ಬದ ಎಫೆಕ್ಟ್, ಹಣ್ಣು-ಹೂಗಳ ಬೆಲೆ ಏರಿಕೆ

Spread the love

Ganesha-Festival-01

ಬೆಂಗಳೂರು, ಆ.23- ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಬಹುತೇಕ ರಸ್ತೆಗಳ ಪಾದಚಾರಿ ಮಾರ್ಗಗಳು ಮಾವಿನ ಸೊಪ್ಪು, ಬಾಳೆಕಂದು ಮತ್ತಿತರ ಸಾಮಗ್ರಿಗಳಿಂದ ತುಂಬಿ ಹೋಗಿವೆ.ನಾಳೆ ಗೌರಿ ಹಬ್ಬ, ಶುಕ್ರವಾರ ಗಣೇಶ ಚತುರ್ಥಿ. ಸೋಮವಾರದಿಂದಲೇ ನಗರದ ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ ಸೇರಿದಂತೆ ಆಯಾ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಗೌರಿ-ಗಣೇಶ ಮೂರ್ತಿಗಳು, ವಿವಿಧ ಸಾಮಾನುಗಳನ್ನು ಸಾರ್ವಜನಿಕರು ಖರೀದಿಸಿದ್ದಾರೆ.

ಇಂದು ಮುಂಜಾನೆಯಿಂದಲೇ ಬಹುತೇಕ ರಸ್ತೆಗಳ ಎರಡೂ ಬದಿ ಪಾದಚಾರಿ ಮಾರ್ಗಗಳಲ್ಲಿ ಗೌರಿ-ಗಣೇಶ ಮೂರ್ತಿಗಳು, ಬಾಳೆ ಹಣ್ಣು ಸೇರಿದಂತೆ ಎಲ್ಲ ಹಣ್ಣುಗಳು, ವಿಧವಿಧದ ಹೂವುಗಳು, ಬಾಳೆಕಂದು, ಮಾವಿನ ಸೊಪ್ಪು, ಮಂಟಪಕ್ಕೆ ಕಟ್ಟುವ ಸಾಮಗ್ರಿಗಳು, ಹೊಂಬಾಳೆ, ಗರಿಕೆ ಸೇರಿದಂತೆ ಎಲ್ಲ ವಸ್ತುಗಳನ್ನೂ ಗ್ರಾಮಾಂತರ ಪ್ರದೇಶಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ನವರಂಗ್, ಬಾಳೆಕಾಯಿ ಮಂಡಿ ರಸ್ತೆ, ಕುರುಬರಹಳ್ಳಿ ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಮತ್ತಿತರೆಡೆ ಪಾದಚಾರಿಗಳು ರಸ್ತೆಯ ಪಕ್ಕದಲ್ಲಿ ಓಡಾಡುವಂತಾಗಿದೆ.

ವರಮಹಾಲಕ್ಷ್ಮಿ ಹಬ್ಬದಲ್ಲಿದ್ದಂತೆಯೇ ಗೌರಿ-ಗಣೇಶ ಹಬ್ಬದಲ್ಲೂ ಎಲ್ಲದರ ಬೆಲೆ ಏರಿಕೆಯಾಗಿದೆ. ಇದರ ನಡುವೆಯೂ ಸಾಂಪ್ರದಾಯಿಕ ಹಬ್ಬವನ್ನು ಜನರು ಸಡಗರದಿಂದಲೇ ಆಚರಿಸಲು ಮುಂದಾಗಿದ್ದಾರೆ.  ಕನಕಾಂಬರ ಹೂ ಕೆಜಿಗೆ 1250 ರಿಂದ 1350ರ ವರೆಗೆ ಮಾರಾಟವಾಗುತ್ತಿದ್ದರೆ, ಏಲಕ್ಕಿ ಬಾಳೆಹಣ್ಣು ಕೆಜಿಗೆ 120ಕ್ಕಿಂತ ಕಡಿಮೆಯಾಗಿಯೇ ಇಲ್ಲ. ಕೆಲವೆಡೆಯಂತೂ 125, 130ರೂ. ತಲುಪಿದ್ದೂ ಇದೆ. ತಮಿಳುನಾಡಿನಿಂದ ಹೆಚ್ಚಿನ ಹೂಗಳು ಬರುತ್ತಿವೆ. ಜತೆಗೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಆನೇಕಲ್ ಭಾಗಗಳಿಂದಲೂ ರೈತರು ಹೂಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಮಲ್ಲಿಗೆ ಹೂ ಒಂದು ಮೊಳಕ್ಕೆ 40 ರಿಂದ 50ರೂ.ಗೆ ಮಾರಾಟ ಮಾಡುತ್ತಿದ್ದುದು ಕಂಡುಬಂತು. ಸೇವಂತಿಗೆ ಮೊಳಕ್ಕೆ 30 ರಿಂದ 40ರೂ., ಗುಂಡು ಸೇವಂತಿಗೆ ಮೊಳಕ್ಕೆ 50 ರಿಂದ 60ರೂ.ಗೆ ಮಾರಾಟವಾಗುತ್ತಿದೆ. ಏಲಕ್ಕಿ ಕೆಜಿಗೆ 120 ರಿಂದ 130ರೂ., ಪಚ್ಚಬಾಳೆ 35 ರಿಂದ 50ರೂ., ಸೀಬೆಹಣ್ಣು 80 ರಿಂದ 100ರೂ., ದ್ರಾಕ್ಷಿ ಒಂದೊಂದು ತಳಿಗೆ ಒಂದೊಂದು ಬೆಲೆ (350ರೂ.) ಇದೆ. ಸಪೋಟ 60ರೂ., ಮೂಸಂಬಿ 70 ರಿಂದ 80ರೂ., ಕಿತ್ತಲೆ ಹಣ್ಣು 70-80ರೂ., ಅನಾನಸ್ 70-80ರೂ., ಸೇಬು 220 ಹಾಗೂ 140ರೂ.

ತರಕಾರಿ ಬೆಲೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ಬೀನ್ಸ್ ಕೆಜಿಗೆ 45 ರಿಂದ 50ರೂ., ಟೊಮ್ಯಾಟೋ 60 ರಿಂದ 70ರೂ., ಸೌತೆಕಾಯಿ 10ರೂ.ಗೆ ಒಂದು ಹೀಗೆ ಎಲ್ಲ ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಸಿದ್ಧತೆ ನಡೆದಿದೆ.

Facebook Comments

Sri Raghav

Admin