ಗೌರಿ-ಗಣೇಶ ಹಬ್ಬ ಆಚರಣೆ ವೇಳೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಲೇಬೇಕು..!

Spread the love

Gowri

ಬೆಂಗಳೂರು, ಸೆ.4- ಭಾರತದ ಸಾಂಪ್ರದಾಯಿಕ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬಕ್ಕೆ ವಿಶೇಷವಾದ ಸ್ಥಾನಮಾನವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲರೂ ಈ ಹಬ್ಬವನ್ನು ವಿವಿಧ ರೀತಿಯಲ್ಲಿ ತನ್ನದೇ ಆದ ಸಂಸ್ಕøತಿ ಸಂಪ್ರದಾಯದಂತೆ ಆಚರಿಸುವ ವೈಖರಿ ಕಂಡುಬರುತ್ತದೆ.   ಹಬ್ಬದ ಆಚರಣೆಯ ರೀತಿ-ರಿವಾಜುಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾದರೂ ಗೌರಿ-ಗಣೇಶ ಹಬ್ಬದ ಸಂಪ್ರದಾಯ ಮಾತ್ರ ದೇಶಾದ್ಯಂತ ಒಂದೇ ರೀತಿ ನಡೆಯುತ್ತದೆ.  ಮೊದಲ ದಿನ (ಇಂದು) ತಾಯಿ ಸ್ವರ್ಣಗೌರಿ ಹಬ್ಬ, ಮಾರನೆ ದಿನ (ನಾಳೆ) ಗಣೇಶನ ಹಬ್ಬ. ಭೂಮಿಗೆ ಬಂದ ತಾಯಿ ಗೌರಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪತಿಯದ್ದಾಗಿರುವುದರಿಂದ ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂದಿರುಗುತ್ತಾನೆ.

ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಈ ಹಬ್ಬ ಪ್ರತೀ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನ ನಡೆಯುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಅತ್ಯಂತ ವೈಭವದಿಂದ ವಿಶೇಷವಾಗಿ, ವಿಶಿಷ್ಟವಾಗಿ ಪೂಜಿಸಲಾಗುತ್ತದೆ.  ಸಗಣಿಯಿಂದ ಪಿಳರಾಯ, ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿದ್ಯುಕ್ತವಾಗಿ ಪೂಜಿಸಿ ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು, ಸಿಹಿ ತಿಂಡಿಗಳನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಸೂರ್ಯನ ಬುದ್ಧಿತತ್ತ್ವಕ್ಕೆ ಮತ್ತು ಚಂದ್ರನ ಮನುಷ್ಯತ್ವಕ್ಕೆ ಪ್ರತೀಕವಾದ ಗಣಪತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ 21 ತತ್ತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ 20 ತತ್ತ್ವಗಳೆಂದರೆ ಪಂಚಭೂತಗಳು, ಪಂಚಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚನ್‍ಮಾತ್ರೆಗಳು.  ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿ ಭಗವಂತನ ನಿಜರೂಪವನ್ನು ಅನುಭವಿಸುತ್ತ ಆನಂದವಾಗಿರಬೇಕು. ಹಾಗೆ ಮಾಡದೆ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರನ ರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ ಗಣೇಶನ ಮಹಿಮೆಯ ಅರಿವು ಉಂಟಾಗದೆ ಅವನ ರೂಪವನ್ನು ಹಾಸ್ಯ ಮಾಡುವ ದುರ್ಬುದ್ಧಿ ಉಂಟಾಗುತ್ತದೆ.

ಗಣೇಶನ ಹುಟ್ಟು:

ಯಾಜ್ಞವಲ್ಕ್ಯ ಸ್ಮೃತಿ ಪ್ರಕಾರ, ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ, ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ. ಈತ ಗೌರಿ ತನ್ನ ಮೈ ಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವ ತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಆಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂದಿರುಗಿದಾಗ ಗಣಪ ಅವರನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಆತನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ.

ಹೆಂಡತಿಯನ್ನು ಸಮಾಧಾನಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆಯ ತಲೆಯನ್ನು ಕತ್ತರಿಸಿ ತರುತ್ತಾರೆ. ಅದನ್ನು ಗಣಪತಿ ದೇಹಕ್ಕೆ ಜೋಡಿಸುತ್ತಾರೆ. ಹೀಗಾಗಿ ಗಣಪ ಗಜಮುಖನಾಗಿ ಗಣಗಳ ಅಧಿಪತಿ ಮತ್ತು ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗುತ್ತಾನೆ.

► Follow us on –  Facebook / Twitter  / Google+

Facebook Comments

Sri Raghav

Admin