ಗೌರಿ ಗಣೇಶ ಹಬ್ಬ : ಮಾರ್ಕೆಟ್ ನಲ್ಲಿ ಶಾಕ್ ನೀಡುತ್ತೆ ಹೂವು, ಹಣ್ಣಿನ ಬೆಲೆ

Fruits

ಬೆಂಗಳೂರು, ಸೆ.3- ನಾಳೆ ಮತ್ತು ನಾಡಿದ್ದು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ವ್ಯಾಪರ ಎಲ್ಲೆಡೆ ಜೋರಾಗಿಯೇ ಸಾಗುತ್ತಿದೆ.   ಹೂವು, ಹಣ್ಣುಗಳ ದರ ಗಗನಕ್ಕೇರಿದೆ. ಒಂದು ದಿನ ಮುಂಚಿತವಾಗಿಯೇ ಇವುಗಳನ್ನು ಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.  ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ವಿವಿಧ ಬಗೆಯ ಹೂವು, ಹಣ್ಣು, ಬಾಳೆಕಂಬ ಸೇರಿದಂತೆ ಹಬ್ಬದ ಸಾಮಗ್ರಿಗಳೆಲ್ಲಾ ಈಗ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಬಣ್ಣಬಣ್ಣದ ಗಣಪತಿ, ಗೌರಿ ವಿಗ್ರಹಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದು, ನಾಳೆಯಿಂದ ಮನೆ ಮನೆಗೆ ಕೊಂಡೊಯ್ಯಲಿದ್ದಾರೆ. ಬೆಂಗಳೂರಿನ ಜನ ಹಬ್ಬದ ಸಾಮಾನುಗಳ ಖರೀದಿಯಲ್ಲಿ ನಿರತರಾಗಿರುವುದು ಕಂಡು ಬಂತು.

ಎಪಿಎಂಸಿ, ಕೆಆರ್ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ಯಲಹಂಕ, ರಾಜಾಜಿನಗರ ಸೇರಿದಂತೆ ಎಲ್ಲಾ ಕಡೆ ಖರೀದಿ ಜೋರಾಗಿತ್ತು. ತುಳಸಿ ಮಾಲೆ ಒಂದು ಮಾರಿಗೆ 60ರೂ. ಮಾರು ಕನಕಾಂಬರಕ್ಕೆ 150ರೂ. ದುಂಡು ಮಲ್ಲಿಗೆ 100, ಗುಲಾಬಿ ಕೆಜಿಗೆ 200ರೂ., ಒಂದು ಕಮಲದ ಹೂವಿಗೆ 15ರೂ., ಡೇರಾ ಒಂದು ಕೆಜಿಗೆ 700ರೂ. ಆಗಿದ್ದು, ಬಡವರು, ಮಧ್ಯಮ ವರ್ಗದವರ ಮೇಲೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ನಾಳೆ ಇವುಗಳ ದರ ಇನ್ನೂ ದುಪ್ಪಟ್ಟು ಹಾಗುವ ನಿರೀಕ್ಷೆ ಇದ್ದು, ವರಮಹಾಲಕ್ಷ್ಮಿ ಹಬ್ಬಕ್ಕಿಂತ ಈ ಬಾರಿ ಹೂವು ಹಾಗೂ ಹಣ್ಣಿನ ದರ ಗಗನಕ್ಕೇರಿದೆ ಎಂದರೆ ತಪ್ಪಾಗಲಾರದು. ಸಾಂಪ್ರದಾಯಿಕ ಹಬ್ಬಗಳ ಆಚರಣೆಗೆ ನಮ್ಮ ಜನ ಹಿಂದೆ ಬೀಳುವುದಿಲ್ಲ. ಎಷ್ಟೆ ದರವಾದರೂ ಕೊಟ್ಟು ಖರೀದಿಸಿ ಹಬ್ಬಗಳನ್ನು ಆಚರಿಸುತ್ತಾರೆ. ಗಲ್ಲಿ ಗಲ್ಲಿಗಳಲ್ಲಿ ಗೌರಿ-ಗಣೇಶನನ್ನು ಕೂರಿಸಿ ಹಬ್ಬವನ್ನು ಆಚರಿಸುತ್ತಾರೆ. ಮನೆಗಳಲ್ಲಿ ಆಚರಿಸುವುದು ಒಂದೆಡೆಯಾದರೆ ಬೀದಿ ಬೀದಿಗಳಲ್ಲಿ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಕೂರಿಸಿ ತಿಂಗಳುಗಟ್ಟಲೆ ಆಚರಿಸುತ್ತಾರೆ. ಆಗಾಗಿ ಈ ಹಬ್ಬಕ್ಕೆ ಎಲ್ಲಿಲ್ಲದ ವಿಶೇಷವಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಈ ಹಬ್ಬವನ್ನು ಅತ್ಯಂತ ವಿಶೇಷ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

► Follow us on –  Facebook / Twitter  / Google+

Sri Raghav

Admin