ಗೌರಿ ಲಂಕೇಶ್ ಕೊಲೆಗಡುಕರ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ..!
ಬೆಂಗಳೂರು, ಸೆ.8-ದುಷ್ಕರ್ಮಿಗಳ ಗುಂಡಿಗೆ ಭೀಕರವಾಗಿ ಕೊಲೆಯಾದ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ಹತ್ಯೆಗೈದ ದುಷ್ಕರ್ಮಿಗಳ ಸುಳಿವು ನೀಡಿದವರಿಗೆ ರಾಜ್ಯ ಸರ್ಕಾರ 10ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಕಳೆದ ಎರಡು ದಿನಗಳಿಂದ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ದುಷ್ಕರ್ಮಿಗಳ ಕುರಿತು ಯಾವುದೇ ಸುಳಿವು ಸಿಗದಿರುವ ಹಿನ್ನೆಲೆಯಲ್ಲಿ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನವನ್ನು ಪ್ರಕಟಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ರಾಮಲಿಂಗಾರೆಡ್ಡಿ, ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಡಿಜಿಪಿ ಆರ್.ಕೆ.ದತ್ತ, ಗುಪ್ತದಳದ ಡಿಜಿ ಎ.ಎಂ.ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳಿಂದ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಪಡೆದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಗೌರಿ ಲಂಕೇಶ್ ಹತ್ಯೆ ನಂತರ ನಡೆದಿರುವ ಘಟನೆಗಳು ಹಾಗೂ ತನಿಖೆ ಕುರಿತಂತೆ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದೇನೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲು ಸೂಚಿಸಿರುವುದಾಗಿ ಹೇಳಿದರು.
ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ. ಅವರು ಎಷ್ಟು ಅಧಿಕಾರಿಗಳನ್ನು ಕೇಳಿದ್ದರೋ ಅಷ್ಟನ್ನು ನೀಡಲು ಡಿಜಿಪಿಗೆ ಸೂಚಿಸಲಾಗಿದೆ. ಹೆಚ್ಚುವರಿಯಾಗಿ ಮತ್ತಷ್ಟು ಸಿಬ್ಬಂದಿ ಕೇಳಿದರೆ ಅನುಮತಿ ನೀಡಲು ಸರ್ಕಾರ ಸಿದ್ಧವಿದೆ. ನಮಗೆ ಆರೋಪಿಗಳು ಯಾರೆಂಬುದು ಗೊತ್ತಾಗಬೇಕು ಎಂದರು. ಈಗಾಗಲೇ ಎಸ್ಐಟಿ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಪ್ರಾರಂಭಿಸಿದೆ. ಕುಟುಂಬದ ಸದಸ್ಯರು, ಆಪ್ತರಿಂದಲೂ ಮಾಹಿತಿ ಪಡೆಯಲಾಗಿದೆ. ಗೌರಿ ಅವರ ಮನೆ ಬಳಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಎಡ-ಬಲ ಮತ್ತು ನಕ್ಸಲ್ ಹೀಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಗೌರಿ ಲಂಕೇಶ್ ಅವರನ್ನು ಯಾವ ಕಾರಣಕ್ಕಾಗಿ ಇಷ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬುದು ಗೊತ್ತಾಗಬೇಕು. ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸ ತಮಗಿದೆ ಎಂದು ಹೇಳಿದರು. ಸಚಿವ ವಿನಯ್ಕುಲಕರ್ಣಿಗೆ ಅನಾಮಧೇಯ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಈಗಾಗಲೇ Z+ ಭದ್ರತೆ ಒದಗಿಸಲಾಗಿದೆ. ಜೀವ ಬೆದರಿಕೆ ಇರುವವರಿಗೆ ಸೂಕ್ತ ರಕ್ಷಣೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೆಲವು ಪ್ರಗತಿಪರ ಚಿಂತಕರಿಗೆ ಅನಾಮಧೇಯ ವ್ಯಕ್ತಿಯಗಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಂತಹವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ನಿರ್ದೇಶಿಸಲಾಗಿದೆ. ವಿಚಾರವಾದಿಗಳಾಗಿರಲಿ ಅಥವಾ ಯಾರೇ ಆಗಿರಲಿ ಪ್ರಾಣ ಬೆದರಿಕೆ ಇರುವವರಿಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಿದರು.
ವಿಚಾರಣೆಗೆ ಸೂಚನೆ:
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಅವರು ಯಾವ ಕಾರಣಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಮಾಹಿತ ಪಡೆಯಲು ಎಸ್ಐಟಿಗೆ ಸೂಚಿಸಲಾಗಿದೆ. ಸಾಧ್ಯವಾದರೆ ಅವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆಯಬೇಕೆಂದು ತಿಳಿಸಿರುವುದಾಗಿ ಹೇಳಿದರು. ಯಾರೇ ಆಗಲಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಅವರು ಜಾವ ಕಾರಣಕ್ಕಾಗಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ನನಗೆ ತಿಳಿದಿಲ್ಲ. ಆದರೆ, ಅವರ ಹೇಳಿಕೆ ನಾನಾ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.