ಗ್ರಾಪಂ ಸದಸ್ಯನ ಮನೆ ದರೋಡೆ ಮಾಡಿದ್ದವರ ಬಂಧನ
ನೆಲಮಂಗಲ, ಫೆ.13– ರೈಸ್ ಪುಲ್ಲಿಂಗ್ ಚೊಂಬು ದಂಧೆಗಾಗಿ ಮಾಡಿಕೊಂಡಿದ್ದ ಸಾಲ ತೀರಿಸುವ ಉದ್ದೇಶದಿಂದ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಮನೆ ದರೋಡೆ ಮಾಡಿದ್ದ ಏಳು ಜನರನ್ನು ನೆಲಮಂಗಲ ಪೊಲೀಸರು ಬಂಧಿಸಿ 23 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಎಂಜಿನಿಯರ್ ವಿಶ್ವನಾಥ ಅಲಿಯಾಸ್ ವಿಶ್ವ (31), ಗ್ರಾಫಿಕ್ ಡಿಜೈನರ್ ಕೆ.ಪ್ರಸಾದ್ (30), ಮಂಜೇಶ್ ಚಂದ್ರನ್ (38), ಶ್ರೀಗಂಧ ಮರಗಳ್ಳ ಭೂದೇಶ್ಗೌಡ (44), ಸುರೇಶ್ ಅಲಿಯಾಸ್ ಸೂರಿ (28), ಅಶ್ವತ್ಥ (23) ಮತ್ತು ರಮೇಶ್ (42) ಬಂಧಿತ ದರೋಡೆಕೋರರು. ಅರಿಶಿನಕುಂಟೆ ಗ್ರಾಮ ಪಂಚಾಯ್ತಿ ಸದಸ್ಯ ರಾಜಣ್ಣ ಅವರ ಹೊನ್ನಗಂಗಯ್ಯ ನಪಾಳ್ಯದಲ್ಲಿರುವ ಮನೆಗೆ ಫೆ.1ರಂದು ಮಧ್ಯಾಹ್ನ ಪತ್ನಿ ಸುಧಾಮಣಿ ಒಬ್ಬರೇ ಇದ್ದಾಗ ಬಂಧಿತ ಏಳು ಮಂದಿ ನುಗ್ಗಿ ರಿವಾಲ್ವರ್ನಿಂದ ಬೆದರಿಸಿ ಚಿನ್ನಾಭರಣ ದೋಚಿದ್ದರು.
ದರೋಡೆಕೋರರು ಸ್ಯಾಂಟ್ರೋ ಕಾರಿನಲ್ಲಿ ಪರಾರಿಯಾಗುವಾಗ ಕಾರು ಪಲ್ಟಿಯಾಗಿತ್ತು. ಈ ವೇಳೆ ದರೋಡೆಕೋರರು ತಪ್ಪಿಸಿಕೊಂಡಿದ್ದ ರಾದರೂ ಚಾಲಕ ಅಶ್ವತ್ಥ್ ಬೆನ್ನಟ್ಟಿ ಬಂದ ಗ್ರಾಮಸ್ಥರಿಗೆ ಸಿಕ್ಕಿಚಿಬಿದ್ದಿದ್ದ. ಈತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯ ರಾಜಣ್ಣ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ಈ ವಿಚಾರ ಅರಿತಿದ್ದ ದೊಡ್ಡಬಳ್ಳಾಪುರದವನಾದ ರಮೇಶ್ ಹಲವು ದಿನಗಳ ಹಿಂದೆ ರಾಜಣ್ಣ ಅವರನ್ನು ಭೇಟಿಯಾಗಿ ಜಮೀನು ಖರೀದಿಸುತ್ತೀರ ಎಂದು ಕೇಳಿ ಮಾತುಕತೆ ನಡೆಸಿದ್ದ ಎಂದು ತಿಳಿದುಬಂದಿದೆ.
ಮಾಹಿತಿದಾರನೊಬ್ಬನನ್ನು ಇಟ್ಟುಕೊಂಡ ರಮೇಶ್, ರಾಜಣ್ಣ ಅವರ ವ್ಯವಹಾರ, ಮನೆಯಲ್ಲಿ ಯಾರ್ಯಾರು ಇರುತ್ತಾರೆ, ಹಣಕಾಸು ವಿಚಾರವಾಗಿ ಮಾಹಿತಿ ಪಡೆದು ಕೊಂಡು ವಿಶ್ವನಾಥನಿಗೆ ತಿಳಿಸಿದ್ದಾನೆ. ವಿಶ್ವನಾಥನ ಜತೆ ಸೇರಿ ಎಲ್ಲ ಆರೋಪಿಗಳೂ ರಾಜಣ್ಣ ಅವರ ಮನೆ ದರೋಡೆಗೆ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಅಮಿತ್ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಆರೋಪಿಗಳೆಲ್ಲರೂ ರೈಸ್ಪುಲ್ಲಿಂಗ್ ಚೊಂಬು ದಂಧೆಯಲ್ಲಿ 70 ರಿಂದ 75 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಸಾಲಗಾರರು ಬೆನ್ನು ಬಿದ್ದಿದ್ದರಿಂದ ದರೋಡೆ ನಡೆಸಿರುವುದು ವಿಚಾರಣೆ ಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. ಆರೋಪಿ ವಿಶ್ವನಾಥ್ ಪಿಎಸ್ಐ ಒಬ್ಬರ ಮಗನಾಗಿದ್ದಾನೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ರಾಜೇಂದ್ರಕುಮಾರ್, ಸಿಪಿಐ ನಾಗರಾಜ್, ಪಿಎಸ್ಐಗಳಾದ ಅಶೋಕ್, ಮಂಜುನಾಥ್, ಅಮರೇಶ್ಗೌಡ ಇದ್ದರು.
< Eesanje News 24/7 ನ್ಯೂಸ್ ಆ್ಯಪ್ >